ಲಂಡನ್: ಇಂಗ್ಲೆಂಡ್ನಲ್ಲಿ ಆರಂಭಗೊಂಡಿರುವ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಉತ್ತಮ ಆರಂಭ, ಇದರ ಮಧ್ಯೆ ಕೊಹ್ಲಿ ಪಡೆಗೆ ಮುಟ್ಟಿ ನೊಡಿಕೊಳ್ಳುವಂತಹ ಆಘಾತವೊಂದು ಎದುರಾಗಿದೆ.
ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿ, ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್ ಹೆಬ್ಬೆರಳಿನ ಗಾಯಕ್ಕೊಳಗಾಗಿ ಮೂರು ವಾರಗಳ ಕಾಲ ತಂಡದಿಂದ ಹೊರಬಿದ್ದಿದ್ದಾರೆ. ಹೀಗಾಗಿ ಅವರ ಸ್ಥಾನದಲ್ಲಿ ಬ್ಯಾಟ್ ಬೀಸುವುದು ಯಾರು ಎಂಬ ಪ್ರಶ್ನೆ ಒಂದೆಡೆ ಉದ್ಭವವಾಗಿದ್ದರೆ, ಕೆ.ಎಲ್. ರಾಹುಲ್ ಅವರ ಸ್ಥಾನದಲ್ಲಿ ಕಣಕ್ಕಿಳಿದರೆ, ನಾಲ್ಕನೇ ಕ್ರಮಾಂಕ ಭರ್ತಿ ಮಾಡುವ ಆಟಗಾರ ಯಾರು ಎಂಬ ಗೊಂದಲ ಕೂಡ ಸದ್ಯ ನಿರ್ಮಾಣಗೊಂಡಿದೆ.
ಆರಂಭಿಕರಾಗಿ ರಾಹುಲ್!?
ಈಗಾಗಲೇ ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದಿರುವ ಕೆಎಲ್ ರಾಹುಲ್ ಮುಂದಿನ ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಜತೆ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ದಟ್ಟವಾಗಿ ಗೋಚರಿಸುತ್ತಿದೆ. ಐಪಿಎಲ್ ಹಾಗೂ ಟೆಸ್ಟ್ ಪಂದ್ಯಗಳಲ್ಲೂ ರಾಹುಲ್ ಆರಂಭಿಕರಾಗಿ ಬ್ಯಾಟ್ ಬೀಸಿದ್ದಾರೆ. ಈ ಹಿಂದಿನ ಎರಡು ಪಂದ್ಯಗಳಲ್ಲಿ ರಾಹುಲ್ ನಾಲ್ಕನೇ ಸ್ಥಾನದಲ್ಲಿ ಬ್ಯಾಟ್ ಬೀಸಿದ್ದರು.
4ನೇ ಕ್ರಮಾಂಕಕ್ಕೆ ಯಾರು!?
ಒಂದು ವೇಳೆ ಕೆಎಲ್ ರಾಹುಲ್ ಆರಂಭಿಕರಾಗಿ ಬ್ಯಾಟ್ ಬೀಸಿದರೆ, ನಾಲ್ಕನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿಯುವುದು ಯಾರು ಎಂಬ ಪ್ರಶ್ನೆ ಉದ್ಭವವಾಗಲಿದೆ. ವಿಕೆಟ್ ಕೀಪರ್ ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್, ಆಲ್ರೌಂಡರ್ ವಿಜಯ್ ಶಂಕರ್ ಅಥವಾ ಕೇದಾರ್ ಜಾಧವ್ ಈ ಸ್ಥಾನಕ್ಕೆ ಸೂಕ್ತ ಎಂಬ ಮಾತು ಕೇಳಿ ಬರುತ್ತಿವೆ. ಕೇದಾರ್ ಜಾಧವ್ ವಿಶ್ವಕಪ್ನಲ್ಲಿ ಈಗಾಗಲೇ ಆರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುತ್ತಿದ್ದಾರೆ. ಇದೀಗ ಇರುವ ಆಯ್ಕೆ ಪ್ರಕಾರ ಅನುಭವಿ ಕಾರ್ತಿಕ್ ಹಾಗೂ ವಿಜಯ್ ಶಂಕರ್ ಮಾತ್ರ.
ಒಂದು ವೇಳೆ ವಿಶ್ವಕಪ್ ಟೂರ್ನಿಯಿಂದ ಶಿಖರ್ ಧವನ್ ಹೊರಬಿದ್ದರೆ, ಬಿಸಿಸಿಐ ಬದಲಿ ಆಟಗಾರರನಿಗೆ ಮಣೆ ಹಾಕಬಹುದು. ಆಗ ಆರಂಭಿಕ ಸ್ಥಾನಕ್ಕಾಗಿ ಶ್ರೇಯಸ್ ಅಯ್ಯರ್ ಅಥವಾ ರಿಷಭ್ ಪಂತ್ರಂತಹ ಆಟಗಾರರು ಟೀಂ ಇಂಡಿಯಾ ಸೇರಿಕೊಳ್ಳಬಹುದು.