ನವದೆಹಲಿ: ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ನಂತರದಲ್ಲಿ ಕೈಕೊಟ್ಟರೆ ಅದನ್ನು ಅತ್ಯಾಚಾರ ಎಂದು ಪರಿಗಣಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ಜಸ್ಟೀಸ್ ಎಲ್.ನಾಗೇಶ್ವರ ರಾವ್ ಹಾಗೂ ಎಂ.ಆರ್.ಶಾ ನೇತೃತ್ವದ ದ್ವಿಸದಸ್ಯ ಪೀಠ ಈ ಆದೇಶ ನೀಡಿದ್ದು, ಅತ್ಯಾಚಾರ ಎನ್ನುವುದು ಮಹಿಳೆಯ ಸಾಮಾಜಿಕ ಘನತೆ ಹಾಗೂ ಗೌರವಕ್ಕೆ ಧಕ್ಕೆ ತರುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಛತ್ತೀಸ್ಗಢ ಮೂಲದ ವೈದ್ಯ ಮಹಿಳೆ 2013ರಲ್ಲಿ ಅತ್ಯಾಚಾರಕ್ಕೆ ಒಳಗಾಗಿದ್ದಳು. 2009ದಿಂದ ದೂರುದಾರ ಮಹಿಳೆ ಪ್ರೀತಿಯಲ್ಲಿದ್ದಳು. ಆಕೆಯ ಪ್ರಿಯಕರ ಮದುವೆಯಾಗುವುದಾಗಿ ನಂಬಿಸಿ 2013ರಲ್ಲಿ ಆಕೆಯನ್ನು ಅತ್ಯಾಚಾರ ಮಾಡಿ ಬೇರೆ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಸಿಕೊಂಡಿದ್ದ. ಆತನ ವಿರುದ್ಧ ದೂರು ದಾಖಲಾಗಿ, ಅತ್ಯಾಚಾರ ಪ್ರಕರಣ ದಾಖಲು ಮಾಡಲಾಗಿತ್ತು. ಆ ವೈದ್ಯ ಮಹಿಳೆ ದೂರನ್ನು ಆಲಿಸಿ ಸುಪ್ರೀಂ ಕೋರ್ಟ್ ಸದ್ಯ ತೀರ್ಪು ನೀಡಿದೆ.
ಹೈಕೋರ್ಟ್ನಲ್ಲಿ ಪ್ರಿಯಕರನಿಗೆ ಹತ್ತು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಲಾಗಿತ್ತು. ಈ ಆದೇಶವನ್ನು ಪ್ರಶ್ನಿಸಿ ಆತ ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಕೆ ಮಾಡಿದ್ದ.
ಈ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ, ಕೊಲೆ ಎನ್ನುವುದು ದೈಹಿಕವಾಗಿ ಒಬ್ಬ ವ್ಯಕ್ತಿಯನ್ನು ನಾಶಗೊಳಿಸುತ್ತದೆ. ಅತ್ಯಾಚಾರ ಎನ್ನುವುದು ಮಹಿಳೆಯನ್ನು ಸಾಮಾಜಿಕ,ದೈಹಿಕ ಹಾಗೂ ಮಾನಸಿಕವಾಗಿ ಸಂಪೂರ್ಣ ಕುಗ್ಗಿಸುತ್ತದೆ ಮತ್ತು ಆಕೆಯ ಜೀವನವನ್ನು ಸಂಪೂರ್ಣವಾಗಿ ನಶಿಸುವಂತೆ ಮಾಡುತ್ತದೆ ಎಂದು ಅಭಿಪ್ರಾಯಪಟ್ಟಿದೆ. ಇದೇ ವೇಳೆ, ಆತನ ಶಿಕ್ಷೆಯ ಪ್ರಮಾಣ ಹತ್ತರಿಂದ ಏಳು ವರ್ಷಕ್ಕೆ ಇಳಿಕೆ ಮಾಡಿ ಆದೇಶ ನೀಡಿದೆ.