ಹುಬ್ಬಳ್ಳಿ: ಕಿಲ್ಲರ್ ಕೊರೊನಾ ವೈರಸ್ ಎಲ್ಲೆಡೆಯೂ ಆತಂಕವನ್ನು ಸೃಷ್ಟಿಸಿರುವುದು ಮಾತ್ರವಲ್ಲದೇ, ಆರ್ಥಿಕ ಸಂಕಷ್ಟ ತಂದೊಡ್ಡಿದೆ. ಮೊದಲ ಅಲೆಗೆ ಹೋಲಿಸಿದರೆ ಎರಡನೇ ಅಲೆಯಿಂದ ಹು-ಧಾ ಮಹಾನಗರ ಪಾಲಿಕೆಗೆ ತೆರಿಗೆ ಸಂಗ್ರಹಣೆಯಲ್ಲಿ ಹಿನ್ನಡೆಯಾಗಿದೆ.
ಹೌದು.., ಹು-ಧಾ ಮಹಾನಗರ ಪಾಲಿಕೆ ಆದಾಯದ ಮೇಲೆ ಕೊರೊನಾ ಪೆಟ್ಟು ಬಲವಾಗಿ ಬಿದ್ದಿದ್ದು, ಈ ಬಾರಿ ಏಪ್ರಿಲ್ ಮತ್ತು ಮೇ ತಿಂಗಳ ಮಾಹೆಯಲ್ಲಿ 22 ಕೋಟಿ 87 ಲಕ್ಷ ತೆರಿಗೆ ಸಂಗ್ರಹವಾಗಿದೆ. ಕಳೆದ ಲಾಕ್ ಡೌನ್ ಸಂದರ್ಭದಲ್ಲಿ 36 ಕೋಟಿಯಷ್ಟು ತೆರಿಗೆ ಸಂಗ್ರಹವಾಗಿತ್ತು. ಈ ಬಾರಿ ಲಾಕ್ಡೌನ್ ಸಂದರ್ಭದಲ್ಲಿ ಹು-ಧಾ ಮಹಾನಗರ ಪಾಲಿಕೆಗೆ ಆದಾಯದ ಹೊಡೆತ ಬಿದ್ದಂತಾಗಿದೆ.
ಕೊರೊನಾ ಎರಡನೇ ಅಲೆಯ ತೀವ್ರತೆ ತಗ್ಗಿಸಲು ಜನತಾ ಕರ್ಫ್ಯೂ ಹಾಗೂ ಲಾಕ್ ಡೌನ್ ನಿರ್ಬಂಧಗಳಿಂದ ಹುಬ್ಬಳ್ಳಿ- ಧಾರವಾಡದ ಅವಳಿನಗರದ ಜನರಿಗೆ ಆಸ್ತಿ ಕರ ಹಾಗೂ ಇನ್ನಿತರ ತೆರಿಗೆ ಪಾವತಿಸಲು ಅನುಕೂಲಕರವಾಗುವಂತೆ ಸ್ಥಾಪಿಸಿದ್ದ ಎಚ್-ಡಿ- 01 ಕೇಂದ್ರಗಳನ್ನು ಬಂದ್ ಮಾಡಿರುವ ಹಿನ್ನೆಲೆ ತೆರಿಗೆ ಸಂಗ್ರಹದಲ್ಲಿ ಹಿನ್ನಡೆಯಾಗಿದೆ.
ಒಟ್ಟಿನಲ್ಲಿ ಎಲ್ಲರಿಗೂ ಆರ್ಥಿಕ ಸಂಕಷ್ಟ ತಂದೊಡ್ಡಿರುವ ಕೊರೊನಾ ಈಗ ಮಹಾನಗರ ಪಾಲಿಕೆ ಆದಾಯಕ್ಕೂ ಕೊಡಲಿ ಪೆಟ್ಟು ಹಾಕಿದೆ. ಸಾರ್ವಜನಿಕರಿಗೆ ಉದ್ಯೋಗ, ಆದಾಯವಿಲ್ಲದೇ ಕರ ಪಾವತಿಸಲು ಕೂಡ ಹಣವಿಲ್ಲದಂತಾಗಿದ್ದು, ಆದಾಯ ಆಕರಣೆಯಲ್ಲಿ ಹಿನ್ನೆಡೆಯಾಗುವಂತಾಗಿದೆ.