ಬೆಳಗಾವಿ: ಕೋವಿಡ್ ವೇಳೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವ್ಯಂಗ್ಯವಾಡಿದ್ದಾರೆ. ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಯಕತ್ವ ಬದಲಾವಣೆ ಸಂಬಂಧ ಬಿಜೆಪಿಯಲ್ಲಿ ಕುಸ್ತಿ ಆಡಿಸ್ತಿವಿ ಅಂತ ಅನೌನ್ಸ್ ಮಾಡಲಾಗಿದೆಯಷ್ಟೇ. ಆದರೆ ಇನ್ನೂ ಕುಸ್ತಿ ಆರಂಭವಾಗಿಲ್ಲ ಎಂದರು.
ಸಿಎಂ ಪರ ಹಾಗೂ ವಿರೋಧಿ ಬಣಗಳ ಮಧ್ಯೆ ಸಹಿ ಸಂಗ್ರಹಣೆ ನಡೆಯುತ್ತಿದೆ. ಕುಸ್ತಿ ಆಡುವವರು ಯಾರು? ಏನು ಅಂತ ನೋಡಿ ಮುಂದಿನ ಹೆಜ್ಜೆ ಇಡುತ್ತೇವೆ. ಅದಕ್ಕಾಗಿಯೇ ಕುಸ್ತಿ ಆರಂಭವಾಗುವ ಹಾದಿ ಕಾಯುತ್ತಿದ್ದೇವೆ. ಅದು ಆರಂಭವಾಗಬೇಕು. ನಮ್ಮ ಮುಂದಿನ ಲೆಕ್ಕಾಚಾರವನ್ನು ಬಳಿಕ ರಿಲೀವ್ ಮಾಡುತ್ತೇವೆ. ಬಿಜೆಪಿಯಲ್ಲಿ ಹಲವರು ದೆಹಲಿಗೆ ಹೋಗಿದ್ದಾರೆ. ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಿದ್ದಾರೆ, ಅದು ಅವರ ಪಕ್ಷದ ಆಂತರಿಕ ವಿಚಾರ. ಜೂ. 16ಕ್ಕೆ ಅರುಣ್ ಸಿಂಗ್ ಕರ್ನಾಟಕಕ್ಕೆ ಬರುತ್ತಿದ್ದಾರೆ. ಬಿಜೆಪಿ ಮುಖಂಡರು ಏನು ನಿರ್ಧಾರ ಕೈಗೊಳ್ತಾರೆ ನೋಡೋಣ ಎಂದರು.
ಕೋವಿಡ್‌ನಂತಹ ಕಠಿಣ ಪರಿಸ್ಥಿತಿ ಕಡೆ ಸರ್ಕಾರ ಹೆಚ್ಚಿನ ಗಮನ ಕೊಡಬೇಕು. ಮೂರನೇ ಅಲೆ ಎದುರಿಸಲು ರಾಜ್ಯ ಸರ್ಕಾರ ಸಜ್ಜಾಗಬೇಕಿದೆ. ಮೊದಲನೇ ಅಲೆ ಬಂದಾಗ ಸಮಸ್ಯೆ ಬೇರೆ ಇತ್ತು, ಎರಡನೇ ಅಲೆಯಲ್ಲಿ ಸಮಸ್ಯೆ ಬೇರೆ ಇತ್ತು. ಮೂರನೇ ಅಲೆಗೆ ಮಕ್ಕಳು ಟಾರ್ಗೆಟ್ ಆಗಲಿದ್ದಾರೆ ಅಂತ ಹೇಳಲಾಗುತ್ತದೆ. ಇದಕ್ಕೆ ಸರ್ಕಾರ ಗಮನ ಕೊಡಬೇಕು, ಅವರ ಪಕ್ಷದ ಆಂತರಿಕ ಸಮಸ್ಯೆ ಆಡಳಿತಕ್ಕೆ ತೊಂದರೆಯಾಗಿದೆ ಎಂದರು.