ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ವಿಧಿಸಿದ್ದ ನಿಷೇಧ ಶಿಕ್ಷೆ ಅಂತ್ಯಗೊಂಡಿದ್ದು, ಶ್ರೀಲಂಕಾದ ದಿಗ್ಗಜ ಆಟಗಾರ ಸನತ್ ಜಯಸೂರ್ಯ ಮತ್ತೆ ಕ್ರಿಕೆಟ್ ಲೋಕಕ್ಕೆ ಕಾಲಿಡಲಿದ್ದಾರೆ.
ಮೆಲ್ಬರ್ನ್‌ನ ಮಲ್‌ಗ್ರೇವ್ ತಂಡಕ್ಕೆ ತರಬೇತುದಾರರಾಗುವ ಮೂಲಕ ಕ್ರಿಕೆಟ್ ಚಟುವಟಿಕೆಗಳಿಗೆ ಮರಳಲು ಸಜ್ಜಾಗಿದ್ದಾರೆ.
2019ರ ಫೆಬ್ರವರಿಯಲ್ಲಿ ಐಸಿಸಿಯ ಭ್ರಷ್ಟಾಚಾರ ಸಂಹಿತೆ ಉಲ್ಲಂಘಿಸಿದ ಆರೋಪದಲ್ಲಿ ಜಯಸೂರ್ಯ ಮೇಲೆ ಎರಡು ವರ್ಷಗಳ ಕಾಲ ನಿಷೇಧ ಹೇರಲಾಗಿತ್ತು. ಇದೀಗ ಜಯಸೂರ್ಯ ಅವರನ್ನು ಕೋಚ್ ಹುದ್ದೆಗೆ ವಹಿಸಿಕೊಳ್ಳುವಂತೆ ಶ್ರೀಲಂಕಾ ತಂಡದ ಮಾಜಿ ಆಟಗಾರ ತಿಲಕರತ್ನೆ ದಿಲ್ಶಾನ್ ಮನವೊಲಿಸಿದ್ದಾರೆ ಎಂದು ‘ಹೆರಾಲ್ಡ್ ಸನ್’ ಪತ್ರಿಕೆ ವರದಿ ಮಾಡಿದೆ.
ದಿಲ್‌ಶಾನ್ ಹಾಗೂ ಶ್ರೀಲಂಕಾದ ಮತ್ತೊಬ್ಬ ಮಾಜಿ ಆಟಗಾರ ಉಪುಲ್ ತರಂಗ ಅವರು ಮಲ್‌ಗ್ರೇವ್ ತಂಡದ ಪರ ಆಡಲಿದ್ದಾರೆ.