ಶಿವಮೊಗ್ಗ : ಅನುಮತಿ ಇಲ್ಲದೆ ಆಕ್ಸಿಜನ್ ಸಿಲಿಂಡರ್ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಶಿವಮೊಗ್ಗದ ಆಟೋ ಕಾಂಪ್ಲೆಕ್ಸ್ನಲ್ಲಿರುವ ಎರಡು ಖಾಸಗಿ ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ವಿನೋಬಾ ನಗರ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಅವರು ಪರಿಶೀಲನೆ ನಡೆಸುತ್ತಿದ್ದ ವೇಳೆ ಅನುಮತಿ ಇಲ್ಲದೆ ಆಕ್ಸಿಜನ್ ಸಿಲಿಂಡರ್ ಮಾರಾಟ ಪ್ರಕರಣ ಬೆಳಕಿಗೆ ಬಂದಿದೆ.
ಆಟೋ ಕಾಂಪ್ಲೆಕ್ಸ್ನಲ್ಲಿರುವ ಎಂಎಸ್ಪಿಎಲ್ ಗ್ಯಾಸ್ ಮತ್ತು ಶಿವಮೊಗ್ಗ ಇಂಡಸ್ಟ್ರಿಯಲ್ ಗ್ಯಾಸಸ್ ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲಿಸಿ ಎಂಟು ಆಕ್ಸಿಜನ್ ಸಿಲಿಂಡರ್ಗಳನ್ನು ವಶಕ್ಕೆ ಪಡೆಯಲಾಗಿದೆ.
ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಆಕ್ಸಿಜನ್ ಅಭಾವ ತಪ್ಪಿಸಲು ಸರ್ಕಾರ, ಆಕ್ಸಿಜನ್ ಸಿಲಿಂಡರ್ ಮಾರಾಟದ ಮೇಲೆ ನಿರ್ಬಂಧ ವಿಧಿಸಿದೆ. ಖಾಸಗಿ ಕಂಪನಿಗಳು, ಗ್ಯಾರೇಜ್‌ಗಳು, ಕೈಗಾರಿಕೆಗಳಿಗೆ ಆಕ್ಸಿಜನ್ ಮಾರಾಟ ಮಾಡುವಂತಿಲ್ಲ. ಆಸ್ಪತ್ರೆಗಳು ಮತ್ತು ಅನುಮತಿ ಪಡೆದ ಕೈಗಾರಿಕೆಗಳಿಗೆ ಮಾತ್ರ ಆಕ್ಸಿಜನ್ ಸಿಲಿಂಡರ್ ಮಾರಾಟ ಮಾಡಬೇಕಿದೆ.
ಆಟೋ ಕಾಂಪ್ಲೆಕ್ಸ್ನಲ್ಲಿರುವ ಎರಡು ಸಂಸ್ಥೆಗಳು ಅನುಮತಿ ಇಲ್ಲದೆ ಸಿಲಿಂಡರ್ ಮಾರಾಟ ಮಾಡಿದ್ದಕ್ಕೆ, ಸಾಂಕ್ರಾಮಿಕ ಕಾಯಿಲೆ ಕಾಯ್ದೆ ಅಡಿಯಲ್ಲಿ ವಿನೋಬಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.