ಲಂಡನ್: ಭಾರತ ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಕೇವಲ ಭಾರತೀಯರರಿಗೆ ಮಾತ್ರವಲ್ಲ, ವಿಶ್ವದಾದ್ಯಂತ ಲಕ್ಷಾಂತರ ಯುವಕರಿಗೆ ಪ್ರೇರಕ ಶಕ್ತಿಯಾಗಿದ್ದಾರೆ ಎಂದು ಪಾಕ್‌ನ ಮಾಜಿ ಸ್ಟಾರ್ ಬ್ಯಾಟ್ಸ್ಮನ್ ಯೂನಿಸ್ ಖಾನ್ ತಿಳಿಸಿದ್ದಾರೆ.
ಪ್ರಸ್ತುತ ಕೊಹ್ಲಿ ಕ್ರಿಕೆಟ್ ಜಗತ್ತಿನ ಧೃುವತಾರೆ. ಪ್ರತಿಪಂದ್ಯದಲ್ಲೂ ಏನಾದರೂ ದಾಖಲೆ ಬರೆಯುವ ಕೊಹ್ಲಿ ಏಕದಿನ ಕ್ರಿಕೆಟ್ನಲ್ಲಿ ಅತೀ ಹೆಚ್ಚು ಶತಕ ಸಿಡಿಸಿರುವ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಅವರನ್ನು ಇಂದಿನ ಯುವ ಆಟಗಾರರು ಮಾದರಿಯನ್ನಾಗಿ ತೆಗೆದುಕೊಳ್ಳುತ್ತಾರೆ.

'ಸಲಾಂ ಕ್ರಿಕೆಟ್ 2019' ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ಯೂನಿಸ್, ವಿರಾಟ್ರನ್ನು ಕೇವಲ ಭಾರತದಲ್ಲಿ ಮಾತ್ರವಲ್ಲದೆ ಪಾಕಿಸ್ತಾನದಲ್ಲೂ ಯುವಕರು ಅನುಸರಿಸಲು ಬಯಸುತ್ತಿದ್ದಾರೆ. ಕೊಹ್ಲಿಯ ಬ್ಯಾಟಿಂಗ್, ಫಿಟ್ನೆಸ್ ಜೊತೆಗೆ ಅವರು ಅನುಸರಿಸುವ ಕೌಶಲ್ಯಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಉಲ್ಲೇಖಿಸಿದ್ದಾರೆ.
ಭಾರತದ ತಂಡದ ವಿಶ್ವಕಪ್ ಯಶಸ್ಸಿನಲ್ಲಿ ಕೊಹ್ಲಿ ಪ್ರಮುಖ ಪಾತ್ರವಹಿಸಲಿದ್ದಾರೆ. ಕೊಹ್ಲಿಯನ್ನು ಆರಾಧಿಸುವ ಕೋಟ್ಯಂತರ ಅಭಿಮಾನಿಗಳು ಅವರ ಆಟವನ್ನು ನೋಡಲು ಕಾತರರಾಗಿದ್ದಾರೆ. ಏಷ್ಯಾಕಪ್ನಲ್ಲಿ ಅವರು ಆಡದಿದ್ದರಿಂದ ಕ್ರೀಡಾಂಗಣಗಳು ಖಾಲಿ ಖಾಲಿಯಾಗಿದ್ದವು ಎಂದು ಅವರು ತಿಳಿಸಿದರು.