ಚಾಮರಾಜನಗರ: ದೇವಾಲಯಕ್ಕೆ ಬರುವ ಭಕ್ತರನ್ನೇ ನಂಬಿ ಅಷ್ಟೋ ಇಷ್ಟೋ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಾ, ಮಾದಪ್ಪನ ಧ್ಯಾನದಲ್ಲಿ ತೊಡಗಿರುತ್ತಿದ್ದ ನಿರ್ಗತಿಕರು ಕೊರೊನಾ ಕರ್ಫ್ಯನಿಂದಾಗಿ ಬಾಣಲೆಯಿಂದ ಬೆಂಕಿಗೆ ಬಿದ್ದಿದ್ದರು. ಆದರೆ, ಈಗ ಅವರಿಗೆ ನೆಮ್ಮದಿಯ ಆಸರೆ ಸಿಕ್ಕಿದೆ.
ಹೌದು, ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ವಾಸ್ತವ್ಯ ಹೂಡಿ ದಿನ ದೂಡುತ್ತಿದ್ದ 11 ಮಂದಿ ನಿರ್ಗತಿಕರನ್ನು ಚಾಮರಾಜನಗರದ ಸ್ಪಂದನ ಹಿರಿಯ ನಾಗರಿಕರ ಪುನರ್ವಸತಿ ಕೇಂದ್ರಕ್ಕೆ ತಂದು ಬಿಡಲಾಗಿದ್ದು, ಕರ್ಫ್ಯೂ ಕಾಲದಲ್ಲಿ ದೇವಾಲಯವೂ ಬಂದ್ ಆಗಿ ಊಟ ಇಲ್ಲದೆ ಪರದಾಡುತ್ತಿದ್ದವರಿಗೆ ಈಗ ನೆಮ್ಮದಿಯ ಆಶ್ರಯ ತಾಣ ಸಿಕ್ಕಿದಂತಾಗಿದೆ. ಉತ್ತಮ ಊಟ, ವೈದ್ಯಕೀಯ ಸೇವೆ ಪಡೆಯುವ ಮೂಲಕ ಕೇಂದ್ರದ ಸಿಬ್ಬಂದಿಯಲ್ಲೇ ಮಕ್ಕಳ ಪ್ರೀತಿ ಕಾಣುತ್ತಿದ್ದಾರೆ.
7 ಮಂದಿ ಮಹಿಳೆಯರು ಹಾಗೂ ನಾಲ್ವರು ಪುರುಷರು ಸದ್ಯ ಆಶ್ರಯ ಪಡೆದಿದ್ದು, ಇವರಿಗೆಲ್ಲಾ ಕೋವಿಡ್ ಟೆಸ್ಟ್ ಮಾಡಲಾಗಿದೆ. ವಿಟಮಿನ್ ಮಾತ್ರೆಗಳನ್ನು ವೈದ್ಯರು ನೀಡಿದ್ದು, ಮನಶಾಸ್ತ್ರಜ್ಞರು ಕೂಡ ಆಪ್ತ ಸಮಾಲೋಚನೆ ನಡೆಸಲಿದ್ದಾರೆ. ಇವರಿಗೆ ಸೇವೆ ಮಾಡುತ್ತಿರುವುದು ನಮಗೊಂದು ಸಾರ್ಥಕ ಭಾವ ಮೂಡಿದೆ. ಈಗ ಮಾಡುತ್ತಿರುವ ಕಾರ್ಯದಿಂದ ನಾವು ಹಿರಿಯರಾದಾಗ ನಮಗ್ಯಾರಾದರೂ ಊರುಗೋಲಾಗುವ ಭಾವನೆ ಮೂಡುತ್ತದೆ ಎಂದು ಸ್ಪಂದನ ಕೇಂದ್ರದ ಸಂಯೋಜಕಿ ಶ್ವೇತಾ ಈಟಿವಿ ಭಾರತಕ್ಕೆ ಮಾಹಿತಿ ನೀಡಿದರು.
ಪುಣ್ಯ ಮಾಡಿದ್ದಕ್ಕೆ ಇಲ್ಲಿಗೆ ಬಂದೆ:
ಮಲೆಮಹದೇಶ್ವರ ಬೆಟ್ಟದಿಂದ ಬಂದು ಆಶ್ರಯ ಪಡೆದಿರುವ ಜಯಮ್ಮ ಎಂಬುವರು ಕಣ್ಣೀರು ಹಾಕುತ್ತಾ ಈಟಿವಿ ಭಾರತದೊಂದಿಗೆ ಮಾತನಾಡಿ, ಊಟ ಮಾಡಿ ಒಂದು ದಿನವಾಗಿತ್ತು ಅದರ ಹಿಂದಿನ ರಾತ್ರಿ ಯಾರೋ ಪೊಲೀಸರು ಊಟ ಕೊಟ್ಟರು. ಬೀದಿಪಾಲಾಗಿದ್ದ ಜೀವನ ಬೀದಿಯಲ್ಲೇ ಕೊನೆಯಾಗುತ್ತದೆಂದುಕೊಂಡಿದ್ದೆ. ಆದರೆ, ಅಧಿಕಾರಿಗಳು ತಂದು ಇಲ್ಲಿಗೆ ಬಿಟ್ಟರು. ರಾತ್ರಿ ಊಟ ಮಾಡಿದೆ, ಸ್ವಂತ ಮಕ್ಕಳು ಕೈ ಬಿಟ್ಟರು. ಆದರೆ ನಾನು ಪುಣ್ಯ ಮಾಡಿದ್ದರಿಂದ ಇವರು ಕೈ ಹಿಡಿದು ನೋಡಿಕೊಳ್ಳುತ್ತಿದ್ದು, ನನ್ನ ಕೊನೆಯುಸಿರು ಇರುವವರೆಗೂ ಇಲ್ಲೇ ಇರುತ್ತೇನೆ ಎಂದು ಕಣ್ಣೀರು ಹಾಕಿದರು.
ಇನ್ನು, ಅಂಗವಿಕಲರು ಮೂವರಿದ್ದು, ಮಲೆಮಹದೇಶ್ವರ ಬೆಟ್ಟದಿಂದ ಬಂದಿರುವ 11 ಮಂದಿ ಸೇರಿದಂತೆ ಒಟ್ಟು 23 ಮಂದಿ ಸದ್ಯ ಸ್ಪಂದನ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಕರ್ಫ್ಯೂ ಕಷ್ಟ ಕಾಲದಲ್ಲಿ ಈ ಪುನರ್ವಸತಿ ಕೇಂದ್ರ ನೆರವಾಗಿ ಸಾರ್ಥಕ ಕಾರ್ಯ ಮಾಡುತ್ತಿದೆ.