ರಾಯಚೂರು: ಲೋಕಸಭಾ ಚುನಾವಣೆಯಲ್ಲಿ ಹಲವಾರು ಕಾನೂನು ವಿರೋಧಿ, ಸಂವಿಧಾನ ಬಾಹಿರ ಚಟುವಟಿಕೆ ನಡೆದಿವೆ. ಅಲ್ಲದೇ ಸಾಂವಿಧಾನಿಕ ಬಿಕ್ಕಟ್ಟಿಗೆ ಕಾರಣವಾಗುವ ಅನೇಕ ಕೆಲಸ ನಡೆದಿದ್ದು, ಇದರ ವಿರುದ್ಧ ಕ್ರಮ ಕೈಗೊಳ್ಳಲು ಸಮಾನ ಮನಸ್ಕ ಸಂಘಟನೆ ಒಕ್ಕೂಟದಿಂದ ರಚಿಸಲಾದ ಜನತಂತ್ರ ಸಮಾಜದಿಂದ ಬಹಿರಂಗ ಪತ್ರ ಬರೆಯಲಾಗಿದೆ ಎಂದು ಸಿಎಫ್ಡಿ ಸಂಚಾಲಕ ಎಸ್.ಆರ್.ಹಿರೇಮಠ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮಾರ್ಚ್ 31ರಂದು ಧಾರವಾಡದಲ್ಲಿ ನಡೆದ ಬೃಹತ್ ಜನ ಸಂಕಲ್ಪ ಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯದಂತೆ 14 ಪುಟಗಳ ಬಹಿರಂಗ ಪತ್ರ ಕಳುಹಿಸಲಾಗುವುದು ಎಂದು ತಿಳಿಸಿದರು.
ಅಲ್ಲದೇ ಇಂದಿನ ಸಂವಿಧಾನ ಬಿಕ್ಕಟ್ಟಿಗೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿಯವರು ಕಾರಣರಾಗಿದ್ದಾರೆ. ಸುಪ್ರೀಂ ಕೋರ್ಟ್ ಸೂಚನೆ ನೀಡಿದರೂ ಚೌಕಿದಾರ್ ಚೋರ್ ಹೈ ಎಂದು ಹೇಳಿ ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂದು ಹೇಳಿದರು.
ದೇಶದ ಸಮಗ್ರ ರಕ್ಷಣೆ ಹಾಗೂ ಸುಧಾರಣೆಗೆ ಹಲವಾರು ಸಂಘಟನೆಗಳು ಒಗ್ಗೂಡಿ ಹೋರಾಟ ಕೈಗೊಂಡಿವೆ. ಇದಕ್ಕೆ ಯೋಗೇಂದ್ರ ಯಾದವ್, ಪ್ರಶಾಂತ ಭೂಷಣ್ ಹೋರಾಟದ ಮಾದರಿ ತಯಾರಿಸಿದ್ದಾರೆ. ಇದಕ್ಕೆ ಗಾಂಧಿ, ಅಂಬೇಡ್ಕರ್, ಜಯಪ್ರಕಾಶ ನಾರಾಯಣ ಅವರ ವಿಚಾರ ಪ್ರೇರಣೆಯಾಗಿದೆ ಎಂದರು.