ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆಗಳ ಉಪಟಳ ಮೀತಿ ಮೀರಿ ಹೋಗಿದೆ. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಸಂತವೇರಿ ಘಾಟ್‍ನಲ್ಲಿ ಕಾಡಾನೆ ಬೀಡುಬಿಟ್ಟಿದೆ.
ರಸ್ತೆಯ ಪಕ್ಕದಲ್ಲಿ ಬೆಳೆದಿರುವ ಬಿದಿರು ತಿನ್ನುವ ಆಸೆಗೆ ಕಾಡಂಚಿನ ರಸ್ತೆಯಲ್ಲಿ ಕಾಡಾನೆಗಳು ಮೊಕ್ಕಂ ಹೂಡಿವೆ. ಇದರಿಂದ ರಸ್ತೆಯಲ್ಲಿ ಸಂಚಾರ ಮಾಡುವ ಜನಸಾಮಾನ್ಯರು ಹೈರಾಣಾಗಿದ್ದು, ರಸ್ತೆಯಲ್ಲಿ ಓಡಾಡದಂತ ಸ್ಥಿತಿ ನಿರ್ಮಾಣ ಆಗಿದೆ. ಕೆಲ ದಿನಗಳ ಹಿಂದೆ ರಸ್ತೆ ಮಧ್ಯೆ ಒಂಟಿ ಸಲಗವನ್ನು ಕಂಡ ಸರ್ಕಾರಿ ಬಸ್ ಚಾಲಕ ಘಾಟಿಯಲ್ಲೇ ಒಂದು ಕಿ.ಮೀ. ಬಸ್ಸನ್ನ ಹಿಮ್ಮುಖವಾಗಿ ಓಡಿಸಿ ಪ್ರಯಾಣಿಕರ ಆತಂಕವನ್ನ ದೂರು ಮಾಡಿದ್ದರು.
ಇದೀಗ ಮತ್ತದೇ ಸಂತವೇರಿ ಘಾಟ್‍ನಲ್ಲಿ ಹಣ್ಣಿನ ಟೆಂಪೋಗೆ ಒಂಟಿ ಸಲಗ ಅಡ್ಡ ಹಾಕಿದ್ದು ವಾಹನದಲ್ಲಿದ್ದಂತಹ ಸಾಕಷ್ಟು ಹಣ್ಣು ಹಂಪಲುಗಳನ್ನು ತಿಂದಿದೆ. ಹಣ್ಣನ್ನು ತಿಂದ ಬಳಿಕ ಟೆಂಪೋವನ್ನು ರಸ್ತೆ ಅಂಚಿಗೆ ನೂಕಿದ್ದು, ರಸ್ತೆ ಮಧ್ಯೆ ಒಂಟಿ ಸಲಗನನ್ನ ಕಂಡು ಚಾಲಕ ಹಾಗೂ ಕ್ಲೀನರ್ ಲಾರಿಯನ್ನ ಬಿಟ್ಟು ಓಡಿ ಹೋಗಿದ್ದಾರೆ. ಇನ್ನು ಈ ಭಾಗದ ಮಲ್ಲೇನಹಳ್ಳಿ ಸುತ್ತಮುತ್ತ ಕಾಡಾನೆ ದಾಳಿಗೆ ಕಳೆದ ಮೂರು ತಿಂಗಳಲ್ಲಿ ಇಬ್ಬರು ಸಾವನ್ನಪ್ಪಿದ್ದು ಕಾಡಾನೆಯನ್ನು ಸ್ಥಳಾಂತರಿಸುವಂತೆ ಸ್ಥಳಿಯರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.