ಚನ್ನರಾಯಪಟ್ಟಣ (ಹಾಸನ) : ಯಾವುದೇ ಸಬೂಬು ಹೇಳದೆ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆ ಕೆಲಸ ಆರಂಭಿಸಬೇಕೆಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಆನೆಕೆರೆ ರವಿ ಆಗ್ರಹಿಸಿದರು.
ಪಟ್ಟಣದಲ್ಲಿ ಮಾತನಾಡಿದ ಅವರು, ಆಧುನೀಕರಣದ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಒಂದು ವರ್ಷದಲ್ಲಿ ಪೂರ್ಣಗೊಳ್ಳಬೇಕಾದ ಕಾಮಗಾರಿ 5 ವರ್ಷವಾದರೂ ಮುಗಿದಿಲ್ಲ. ಎರಡು ತಿಂಗಳ ಹಿಂದೆ ಹೊಗೆಸೂಸುವ ಯಂತ್ರ ಸಿಡಿದ ಪರಿಣಾಮ ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆ ಪ್ರಕ್ರಿಯೆ ವಿಳಂಬವಾಗುತ್ತಿದೆ. ಶೀಘ್ರ ಕಾಮಗಾರಿ ಪೂರ್ಣಗೊಳಿಸಿ ಕಬ್ಬು ಅರೆಯುವಿಕೆ ಕಾರ್ಯ ಆರಂಭಿಸಬೇಕೆಂದು ಅವರು ಒತ್ತಾಯಿಸಿದರು.
ಕಾಚೇನಹಳ್ಳಿ ಏತ ನೀರಾವರಿ ಯೋಜನೆಯ ಮೊದಲನೇ ಹಂತದಿಂದ ಕೆರೆಗಳಿಗೆ ನೀರು ಹರಿಸಲಾಗಿದೆ. ಆದರೆ, 2ನೇ ಹಂತಕ್ಕೆ ನೀರು ಹರಿದಿಲ್ಲ. ಬಂಡೆಕಲ್ಲು ತೆರವುಗೊಳಿಸುವ ಕೆಲಸವನ್ನು ಚುರುಕುಗೊಳಿಸುವ ಮೂಲಕ ಎರಡನೇ ಹಂತಕ್ಕೆ ನೀರು ಹರಿಸಬೇಕಿದೆ. ಈಗಾಗಲೇ ಶಂಕುಸ್ಥಾಪನೆ ನೆರವೇರಿಸಿದ್ದು, 3ನೇ ಹಂತದ ಕಾಮಗಾರಿಯನ್ನು ಆರಂಭಿಸಬೇಕು ಎಂದರು.
ಆಲಗೊಂಡನಹಳ್ಳಿ ಏತ ನೀರಾವರಿ ಯೋಜನೆ ಅವೈಜ್ಞಾನಿಕವಾಗಿದೆ. ಸಣ್ಣ ಪ್ರಮಾಣದಲ್ಲಿ ಪೈಪ್‌ಗಳನ್ನು ಅಳವಡಿಸಲಾಗುತ್ತಿದೆ. ಇದರಿಂದ ಪೂರ್ಣ ಪ್ರಮಾಣದಲ್ಲಿ ನೀರು ಹರಿಸಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಯೋಜನೆಯಿಂದ ರೈತರಿಗೆ ಅನುಕೂಲ ಆಗುವಂತಿರಬೇಕೇ ಹೊರತು, ಗುತ್ತಿಗೆದಾರರ ಜೇಬು ತುಂಬಿಸುವ ಉದ್ದೇಶವಾಗಿರಬಾರದು ಎಂದು ದೂರಿದರು. ಈ ಕುರಿತಂತೆ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.