ಧಾರವಾಡ: ರಾಜ್ಯ ಗ್ರಾಮ ಪಂಚಾಯತ್ ನೌಕರರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘದ ವತಿಯಿಂದ ಜಿಲ್ಲಾ ಪಂಚಾಯಿತಿ ಎದುರಿಗೆ ಪ್ರತಿಭಟನೆ ನಡೆಸಲಾಯಿತು
ಜಿಲ್ಲಾ ಪಂಚಾಯಿತಿ ಎದುರು ಜಮಾಯಿಸಿದ ಗ್ರಾಮ ಪಂಚಾಯಿತಿ ನೌಕರರು ಸರ್ಕಾರದ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲೆಯ ಹುಬ್ಬಳ್ಳಿ, ಕಲಘಟಗಿ, ಕುಂದಗೋಳ, ನವಲಗುಂದ ಹಾಗೂ ಧಾರವಾಡ ತಾಲೂಕಿನ ಕ್ಲರ್ಕ್, ಬಿಲ್ ಕಲೆಕ್ಟರ್, ಕಂಪ್ಯೂಟರ್ ಆಪರೇಟರ್, ಪಂಪ್ ಆಪರೇಟರ್, ಸಿಪಾಯಿ ಹಾಗೂ ಸಫಾಯಿ ಕರ್ಮಚಾರಿಗಳ ವೇತನ ತಿಂಗಳಿಗೊಮ್ಮೆ ಮಾಡಬೇಕು. ಇಎಫ್ಎಂಎಸ್ ಮೂಲಕ ವೇತನ ಹಾಕಬೇಕು ಎಂದು ಆಗ್ರಹಿಸಿದರು.
ಎಸ್ಸೆಸ್ಸೆಲ್ಸಿ ತೇರ್ಗಡೆ ಹೊಂದಿದ 5 ವರ್ಷ ಸೇವೆ ಸಲ್ಲಿಸಿದ ವಾಟರಮೆನ್, ಪಂಪ್ ಆಪರೇಟರ್, ಸಿಫಾಯಿ ಹಾಗೂ ಸಫಾಯಿ ಕರ್ಮಚಾರಿಗಳಿಗೆ ಬಿಲ್ ಕಲೆಕ್ಟರ್ ಹುದ್ದೆಗೆ ಬಡ್ತಿ ನೀಡಬೇಕು. ಕೆಲ ಪಂಚಾಯಿತಿಗಳಲ್ಲಿ ನೌಕರರ ಮೇಲೆ ಕಿರುಕುಳ ಮತ್ತು ಶೋಷಣೆಗಳು ಹೆಚ್ಚಾಗುತ್ತಿವೆ ಎಂದು ಪ್ರತಿಭಟನಾಕಾರರು ದೂರಿದರು. ಕೂಡಲೇ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.