ಮೈಸೂರು: ಅಧಿಕಾರಿಗಳನ್ನು ವರ್ಗಾವಣೆ ಮಾಡಿಸುವ ತಾಕತ್ತು ನನಗೆ ಬೇಡ ಎಂದು ಚಾಮುಂಡೇಶ್ವರಿ ಶಾಸಕ ಜಿ.ಟಿ.ದೇವೇಗೌಡಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಮೈಸೂರಿಗೆ ಹೊರಗಿನವನು. ನಾನು ಸ್ಪರ್ಧಿಸಿದ ಮೊದಲ ಲೋಕಸಭಾ ಚುನಾವಣೆಯಲ್ಲಿ ಜನತೆ ಮೂವತ್ತು ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದರು. ನನ್ನ ತಾಕತ್ತು ತೋರಿಸಿ ಒಳ್ಳೆ ಕೆಲಸ ಮಾಡಿದ್ದರಿಂದ ಎರಡನೇ ಬಾರಿ 1 ಲಕ್ಷ 40 ಸಾವಿರ ಮತಗಳಿಂದ ಗೆಲ್ಲಿಸಿದರು. ಇದಕ್ಕಿಂತಲೂ ನಾನು ಯಾವ ತಾಕತ್ತು ತೋರಿಸಬೇಕು ಎಂದು ಪ್ರಶ್ನಿಸಿದ್ದಾರೆ.
ಡಿಸಿಯನ್ನೋ ಅಥವಾ ಇನ್ನಾವುದೋ ಅಧಿಕಾರಿಯನ್ನು ವರ್ಗಾವಣೆ ಮಾಡಿಸುವುದು ರಾಜಕಾರಣಿಗಳಿಗೆ ಕಾಮನ್. ಇದು ನನ್ನ ದೃಷ್ಟಿಯಲ್ಲಿ ಅತ್ಯಂತ ಸಣ್ಣ ಕೆಲಸ. ಅಂತಹ ಸಣ್ಣ ಕೆಲಸ ನಾನು ಮಾಡುವುದಿಲ್ಲ. ಸರ್ಕಾರ ಕೊಟ್ಟ ಅಧಿಕಾರಿಗಳ ಜೊತೆ ಕೆಲಸ ಮಾಡುವುದು ನನ್ನ ಕರ್ತವ್ಯ ಎಂದು ಹೇಳಿದರು.
ಮೈಸೂರು ಡಿಸಿಯನ್ನ ಕಟಕಟೆಗೆ ನಿಲ್ಲಿಸುತ್ತಿದ್ದರು:
ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೇ ಮೃತಪಟ್ಟ ಘಟನೆಯಿಂದ ಮೈಸೂರು ಡಿಸಿಯನ್ನು ಕಟಕಟೆಗೆ ನಿಲ್ಲಿಸುತ್ತಿದ್ದರು. ಅವಾಗೆಲ್ಲ ಇವರೆಲ್ಲಾ ಎಲ್ಲಿ ಹೋಗಿದ್ದರು? ಆಗ ನಾನು ಡಿಸಿ ಪರವಾಗಿ ಧ್ವನಿ ಎತ್ತಿದೆ ಎಂದು ಜಿ.ಟಿ.ದೇವೇಗೌಡರಿಗೆ ಟಾಂಗ್ ಕೊಟ್ಟರು. ಇನ್ನು ಟಿಟಿಡಿ ಅವರು ಪ್ರತಾಪ್ ಸಿಂಹಗೆ ತಾಕತ್ ಇದ್ದರೆ ಡಿಸಿಯನ್ನು ವರ್ಗಾವಣೆ ಮಾಡಿಸಲಿ ಎಂದು ಸವಾಲು ಹಾಕಿದ್ದರು.