ಬೆಂಗಳೂರು: ಪಾರ್ಕಿಂಗ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ಕಾರಣಕ್ಕೆ ಪಾದಚಾರಿ ಮಾರ್ಗ ತೆರವುಗೊಳಿಸಬೇಕು ಎಂದು ನೂರಾರು ಸಾರ್ವಜನಿಕರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ರಿಗೆ ಮನವಿ ಮಾಡಿದರು.
ಸಂಚಾರ ಸಂಪರ್ಕ ದಿವಸ್ ಹಿನ್ನೆಲೆ ಶನಿವಾರ ಬಸವನಗುಡಿ ಸಂಚಾರ ಠಾಣೆ ವ್ಯಾಪ್ತಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬೆಂಗಳೂರು ಸಂಚಾರಿ ಪೊಲೀಸರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನೂರಾರು ಮಂದಿ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.ಪಾದಚಾರಿ ಮಾರ್ಗಗಳಲ್ಲಿ ತಳ್ಳುವ ಗಾಡಿ ವ್ಯಾಾಪಾರಿಗಳು ಇರುತ್ತಾರೆ. ಅದರಿಂದ ಓಡಾಡಲು ಸಾಧ್ಯವಾಗುತ್ತಿಲ್ಲ. ಮನೆ, ಕಚೇರಿಗಳ ಮುಂದೆ ಅಪರಿಚಿತ ವ್ಯಕ್ತಿಗಳು ವಾಹನಗಳ ಪಾರ್ಕಿಂಗ್ ಮಾಡುತ್ತಾರೆ. ಪ್ರಶ್ನಿಸಿದರೆ ರಸ್ತೆ ನಿಮ್ಮದಾ? ಎಂದೆಲ್ಲ ಮರು ಪ್ರಶ್ನಿಸುತ್ತಾರೆ. ರಸ್ತೆ ಕಾಮಗಾರಿಗಳಿಂದ ಸಂಚಾರ ದಟ್ಟಣೆ ಅಧಿಕವಾಗಿದ್ದು, ಅದಕ್ಕೆ ಪರ್ಯಾಯ ಮಾರ್ಗ ಸೂಚಿಸಬೇಕು. ಹೀಗೆ ಹತ್ತಾರು ಪ್ರಶ್ನೆಗಳನ್ನು ಆಯುಕ್ತರ ಮುಂದಿಟ್ಟರು.
ಇದಕ್ಕೆ ಉತ್ತರಿಸಿದ ಪೊಲೀಸ್ ಆಯುಕ್ತ ಕಮಲ್ ಪಂತ್, ಪಾದಚಾರಿ ಮಾರ್ಗ ತೆರವುಗೊಳಿಸುವ ಬಗ್ಗೆ ಈಗಾಗಲೇ ಬಿಬಿಎಂಪಿಗೆ ಪತ್ರ ಬರೆಯಲಾಗಿದೆ. ಮುಂದಿನ ದಿನಗಳಲ್ಲಿ ಜಂಟಿಯಾಗಿ ತೆರವು ಕಾರ್ಯ ನಡೆಯಲಿದೆ. ನಗರದಲ್ಲಿ ಪಾರ್ಕಿಂಗ್ ದೊಡ್ಡ ಸಮಸ್ಯೆಯಾಗಿದೆ. ಈ ಬಗ್ಗೆ ಬಿಬಿಎಂಪಿ ಹಾಗೂ ಸಂಬಂಧಿಸಿದ ಇಲಾಖೆಗೆ ಜತೆ ಆಗಾಗ ಚರ್ಚೆ ನಡೆಸಲಾಗುತ್ತಿದ್ದು, ಸದ್ಯದಲ್ಲೇ ಪರಿಹಾರ ಕಂಡುಕೊಳ್ಳಲಾಗುತ್ತದೆ ಎಂದು ಹೇಳಿದರು.