ಕಾರವಾರ: ಬ್ಯಾಂಕ್ ಅಧಿಕಾರಿ, ಕೋರಿಯರ್ ಬಾಯ್, ಓಎಲ್ಎಕ್ಸ್ ಎಂದು ವಿವಿಧ ಸೋಗಿನಲ್ಲಿ ಕರೆ ಮಾಡವ ವಂಚಕರು ಕ್ಷಣ ಮಾತ್ರದಲ್ಲಿ ಗ್ರಾಹಕರನ್ನು ಮರಳು ಮಾಡಿ ಅವರ ಬ್ಯಾಂಕ್ ಖಾತೆಯಿಂದ ಹಣ ವಂಚಿಸುತ್ತಿದ್ದಾರೆ.
ಇಂತಹ ವಂಚಕರ ಬಲೆಗೆ ಉತ್ತರಕನ್ನಡ ಜಿಲ್ಲೆಯ ಜನರು ಹೆಚ್ಚಾಗಿ ಬೀಳುತ್ತಿದ್ದಾರೆ. ಈ ಕುರಿತಾಗಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಒಟ್ಟು 45 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. 1 ಕೋಟಿಗೂ ಹೆಚ್ಚು ಹಣ ವಂಚಿಸಿರುವುದು ಬೆಳಕಿಗೆ ಬಂದಿದೆ.
ಬ್ಯಾಂಕ್ ಸಿಬ್ಬಂದಿಗೂ ವಂಚನೆ:
ಜಿಲ್ಲೆಯಲ್ಲಿ ವಂಚನೆಗೊಳಗಾಗುವವರ ಪೈಕಿ ಬ್ಯಾಂಕ್ ಸಿಬ್ಬಂದಿ, ಎಂಜಿನಿಯರ್, ಶಿಕ್ಷಕರು, ನಿವೃತ್ತ ನೌಕರರು, ಖಾಸಗಿ ಉದ್ಯೋಗಿಗಗಳಿದ್ದಾರೆ. ಜಿಲ್ಲೆಯ ಮುಂಡಗೋಡ ತಾಲೂಕಿನಲ್ಲಿ ಬ್ಯಾಂಕ್ವೊಂದರ ಸಿಬ್ಬಂದಿಗೆ ಕಳುಹಿಸಿದ್ದ ಕೋರಿಯರ್ ಹೋಗಿಲ್ಲ. ಅದನ್ನು ತಲುಪಿಸಲು ಆನ್ಲೈನ್ ಆ್ಯಪ್ ಮೂಲಕ 10 ರೂ. ಪಾವತಿಸಿ ಎಂದು ಹೇಳಿ, ಬಳಿಕ ಒಟಿಪಿ ಪಡೆದು 50 ಸಾವಿರ ರೂ. ವಂಚಿಸಲಾಗಿದೆ. ಉತ್ತರ ಪ್ರದೇಶ, ದೆಹಲಿ ಸೇರದಂತೆ ಹೊರ ರಾಜ್ಯಗಳಿಂದ ಆನ್ಲೈನ್ ಕರೆ ಇಲ್ಲವೇ ಸಂದೇಶದ ಮೂಲಕ ಗ್ರಾಹಕರನ್ನು ಮೋಸದ ಸುಳಿಗೆ ಕೆಡವುತ್ತಿದ್ದಾರೆ ಖದೀಮರು.
ಹೇಗೆ ಮೋಸ ಮಾಡುತ್ತಾರೆ?
ತಾವು ಬ್ಯಾಂಕ್ ಅಧಿಕಾರಿ ಎಂದು ಪರಿಚಯಿಸಿಕೊಂಡು ಎಟಿಎಂ ನಂಬರ್, ಪಿನ್, ಒಟಿಪಿ ಪಡೆದು ವಂಚಿಸುವುದು. ಕೊರಿಯರ್ ಬಾಯ್ ಇಲ್ಲವೇ ಬಹುಮಾನದ ನೆಪದಲ್ಲಿ ಆನ್ಲೈನ್ ಪೇಮೆಂಟ್ ಮೂಲಕ 10 ರೂ. ಪಡೆಯುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಮುಂಚೆ ಹಿಂದಿ ಇಲ್ಲವೇ ಇಂಗ್ಲಿಷ್ನಲ್ಲಿ ಮಾತನಾಡುತ್ತಿದ್ದ ವಂಚಕರು, ಇದೀಗ ಕನ್ನಡದಲ್ಲಿಯೂ ಕರೆ ಮಾಡಿ ಮಾತನಾಡುತ್ತಿದ್ದಾರೆ. ಕರ್ನಾಟಕದಲ್ಲಿಯೂ ಈ ವಂಚಕರ ಜಾಲ ಹಬ್ಬಿದ್ದು, ಎಚ್ಚರ ವಹಿಸುವಂತೆ ಪೊಲೀಸ್ ಇಲಾಖೆ ಜಾಗೃತಿ ಮೂಡಿಸುತ್ತಿದೆ.
ಇನ್ನು ಜಿಲ್ಲೆಯಲ್ಲಿ ಆನ್ಲೈನ್ ವಂಚನೆ ಹೆಚ್ಚುತ್ತಿರುವುದನ್ನು ಮನಗಂಡ ಪೊಲೀಸ್ ಇಲಾಖೆ ಇದೀಗ ಕರಪತ್ರಗಳ ಮೂಲಕ ಜಾಗೃತಿ ಮೂಡಿಸುತ್ತಿದೆ. ಅಲ್ಲದೆ ಫೇಸ್ಬುಕ್, ಟ್ವಿಟ್ಟರ್, ವಾಟ್ಸ್ಯಾಪ್ಗಳಲ್ಲಿ ಎಚ್ಚರಿಕೆ ಮಾಹಿತಿವುಳ್ಳ ಬರಹಗಳ ಪೋಸ್ಟರ್ ಹಾಗೂ ಬ್ಯಾಂಕ್ ಖಾತೆ ವಿವರ, ಒಟಿಪಿ ಸೇರಿದಂತೆ ಇನ್ನಿತರ ಗೌಪ್ಯ ಮಾಹಿತಿ ಹಂಚಿಕೊಳ್ಳದಂತೆ ಸಾರ್ವಜನಿಕರಲ್ಲಿ ಪೊಲೀಸರು ಅರಿವು ಮೂಡುಸುತ್ತಿದ್ದಾರೆ.