ಬೀದರ್: ಬರಗಾಲದ ಸಂದರ್ಭದಲ್ಲಿ ಕರ್ತವ್ಯಲೋಪ ಎಸಗಿದ ಆರೋಪದ ಮೇಲೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಅಮಾನತು ಮಾಡಿರುವ ಜಿಲ್ಲಾ ಪಂಚಾಯತ್ ಸಿಇಒ ಮಹಾಂತೇಶ ಬಿಳಗಿ, ಇಬ್ಬರು ತಾಲೂಕು ಮಟ್ಟದ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.
ಜಿಲ್ಲೆಯ ಔರಾದ್ ತಾಲೂಕಿನ ಚಿಮ್ಮೆಗಾಂವ್ ತಾಂಡದಲ್ಲಿರುವ ಸಾರ್ವಜನಿಕ ಏಕೈಕ ಬಾವಿಯಲ್ಲಿ ಜೀವದ ಹಂಗು ತೊರೆದು ನೀರು ಸೇದುವಾಗ ಬಬನ ಎಕನಾಥ ರಾಠೋಡ ಎಂಬ ಯುವಕ ಬಾವಿಗೆ ಕಾಲು ಜಾರಿ ಬಿದ್ದು ಎರಡು ಕಾಲುಗಳನ್ನು ಕಳೆದುಕೊಂಡಿದ್ದ. ಈ ಬಗ್ಗೆ ಗ್ರಾಮಸ್ಥರ ಗೋಳನ್ನು ಈಟಿವಿ ಭಾರತ ವಿಸ್ತೃತವಾಗಿ ವರದಿ ಮಾಡಿತ್ತು. ನಂತರ ಗ್ರಾಮದಲ್ಲಿ ಟ್ಯಾಂಕರ್ ನೀರಿನ ವ್ಯವಸ್ಥೆ ಕೂಡ ಮಾಡಲಾಗಿತ್ತು.
ಕಳೆದ ಮೂರ್ನಾಲ್ಕು ದಿನದಿಂದ ಟ್ಯಾಂಕರ್ನಿಂದ ನೀರುಣಿಸುವ ಕೆಲಸವನ್ನ ಬಂದ್ ಮಾಡಿ ಸಾರ್ವಜನಿಕ ಸೇವೆಗೆ ವ್ಯತ್ಯಯ ಉಂಟು ಮಾಡಿದ ಕರ್ತವ್ಯಲೋಪ ಆರೋಪದಡಿಯಲ್ಲಿ ಪಿಡಿಒ ತಾನಾಜಿ ಪಾಟೀಲ್ರನ್ನು ಅಮಾನತುಗೊಳಿಸಲಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ನೀರಿನ ಭೀಕರತೆ ಎದುರಿಸುವ ತಾಂಡ ನಿವಾಸಿಗರ ಸಮಸ್ಯೆ ಬಗೆಹರಿಸುವಲ್ಲಿ ವಿಫಲರಾದ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮೂರ್ತಿ ಹಾಗೂ ಗ್ರಾಮೀಣ ನೀರು ಸರಬರಾಜು ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ರವಿಂದ್ರ ಅವರಿಗೆ ಕಾರಣ ಕೇಳಿ ನೋಟೀಸ್ ನೀಡುವ ಮೂಲಕ ಆಡಳಿತಕ್ಕೆ ಚುರುಕು ಮುಟ್ಟಿಸಿದ್ದಾರೆ.