ಇಸ್ಲಾಮಾಬಾದ್: ಪಾಕಿಸ್ತಾನದ ಕ್ರೈಸ್ತ ಸಮುದಾಯದ ಹೆಣ್ಣುಮಕ್ಕಳನ್ನೇ ಗುರಿಯಾಗಿಸಿಕೊಂಡಿರುವ ಚೀನೀಯರು ಸಾವಿರಾರು ಡಾಲರ್ ಕೊಟ್ಟು ಅವರನ್ನು ಮದುವೆಯಾಗುತ್ತಿದ್ದು, ನಂತರ ಸೆಕ್ಸ್ ಸ್ಲೇವ್ಗಳನ್ನಾಗಿ (ಲೈಂಗಿಕ ಜೀತದಾಳು) ಮಾಡಿಕೊಳ್ಳುತ್ತಿದ್ದಾರೆ ಎಂಬ ಭೀಕರ ವಿಷಯ ಬೆಳಕಿಗೆ ಬಂದಿದೆ.
ಚೀನಾದಿಂದ ಪರಾರಿಯಾಗಿ ತವರು ತಲುಪಿರುವ ಹೆಣ್ಣುಮಗಳೊಬ್ಬಳು ತಾನು ಅನುಭವಿಸಿದ ನರಕಯಾತನೆಯನ್ನು ಬಿಚ್ಚಿಟ್ಟಿದ್ದು, ಅಲ್ಲಿನ ಮಾನವ ಹಕ್ಕುಗಳ ಆಯೋಗವು ಕಾಲದಿಂದಲೂ ಎರಡೂ ದೇಶಗಳ ಕಿವಿಹಿಂಡಿದ್ರೂ ಏನೂ ಪ್ರಯೋಜನವಾಗಿಲ್ಲ. ಸದ್ಯ ಚೀನಾದಿಂದ ತಪ್ಪಿಸಿಕೊಂಡು ಬಂದಿರುವ ಮಹಿಳೆಯೊಬ್ಬಳು ತಾನು ಅನುಭವಿಸಿದ ನರಕ ಯಾತನೆಯನ್ನು ಬಿಚ್ಚಿಟ್ಟಿದ್ದಾಳೆ.
ನಾನು ಹದಿನಾರು ವರ್ಷವಿರುವಾಗ ಚೀನಾ ಮೂಲದ ವ್ಯಕ್ತಿಯೊಂದಿಗೆ ಮದುವೆಯಾದೆ. ಹಣವಂತನಾದ ಕಾರಣ ತಂದೆ ತಾಯಿ ಕಣ್ಮುಚ್ಚಿಕೊಂಡು ಒಪ್ಪಿದರು. ಆದರೆ, ಮದುವೆಯಾದ ಮೇಲೆ ಆತ ಕೊಟ್ಟ ಕಿರುಕುಳ ಒಂದೆರಡಲ್ಲ.
ಅವರು ಹೇಳಿದಂತೆ ಕೇಳದ ಮಹಿಳೆಯರನ್ನು ಹಳ್ಳಿಗಾಡು ಪ್ರದೇಶದಲ್ಲಿ ಬಿಡುತ್ತಾರೆ. ಅಲ್ಲಿ ಕುಡಿಯಲು ಒಂದು ಹನಿ ನೀರೂ ಕೊಡಲ್ಲ. ಮೊಬೈಲ್, ಪತ್ರ ಯಾವ ಸಂಪರ್ಕವೂ ಇರಲ್ಲ. ಹೀಗೆ ಚಿತ್ರ ಹಿಂಸೆ ಕೊಡುತ್ತಾರೆ ಎಂದು ಸಂತ್ರಸ್ತೆ ಹೇಳಿದ್ದಾರೆ.
ಪಾಕಿಸ್ತಾನದ ಕ್ರೈಸ್ತ ಸಮುದಾಯದ ಹೆಣ್ಣುಮಕ್ಕಳೆಂದರೆ ಸಾಮಾನ್ಯ ಬಡ ವರ್ಗಕ್ಕೆ ಸೇರಿದವರು. ಚರ್ಚ್ನ ಫಾದರ್ಗಳೇ ಚೀನೀಯರಿಂದ ಹಣ ಪಡೆದು ಹೆಣ್ಣುಮಕ್ಕಳ ಪೋಷಕರ ಮನವೊಲಿಸುತ್ತಿದ್ದಾರೆ. ಮಗಳು ಹೇಗೋ ಚೆನ್ನಾಗಿರುತ್ತಾಳೆ ಎನ್ನುವ ಸಮಾಧಾನಕ್ಕೆ ಪೋಷಕರು ಒಪ್ಪಿಕೊಂಡರೂ, ಆ ನಂತರ ಆಕೆ ಸಂಪರ್ಕಕ್ಕೆ ಸಿಗುವುದಿಲ್ಲ ಎಂದು ತಿಳಿದುಬಂದಿದೆ.
ಈ ರೀತಿ ಸಾವಿರಾರು ಹೆಣ್ಣುಮಕ್ಕಳು ಚೀನಾದ ಹೆಣ್ಣುಬಾಕರಿಗೆ ಗುರಿಯಾಗಿದ್ದು, ಇವರ ರಕ್ಷಣೆ ಕುರಿತು ಎರಡೂ ದೇಶಗಳ ಸರ್ಕಾರ ತಲೆ ಕೆಡಿಸಿಕೊಂಡಿಲ್ಲ ಎಂದು ಮಾನವ ಹಕ್ಕು ಆಯೋಗ ಹೇಳುತ್ತಿದೆ.