ಮಂಗಳೂರು: ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಎರಡನೇ ಆಮ್ಲಜನಕ ಲಿಕ್ವಿಡ್ ಟ್ಯಾಂಕ್ ಜೋಡಣಾ ಕಾರ್ಯ ಯಶಸ್ವಿಯಾಗಿ ನೆರವೇರಿದೆ.
ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ವೈದ್ಯಕೀಯ ತಜ್ಞರು, ದಾದಿಯರು ಹಾಗೂ ತಂತ್ರಜ್ಞರು ಸೇರಿ ಸತತ ಮೂರು ಗಂಟೆಗಳ ಕಾಲ ನಾಜೂಕಾಗಿ ಈ ಕಾರ್ಯಾಚರಣೆ ಪೂರೈಸಿದೆ.
ವೆನ್ಲಾಕ್ ಆಸ್ಪತ್ರೆ ಈಗಾಗಲೇ ಕಾರ್ಯಾಚರಿಸುತ್ತಿರುವ ಆಮ್ಲಜನಕ ಲಿಕ್ವಿಡ್ ಟ್ಯಾಂಕ್ಗೆ ಹೊಸ ಟ್ಯಾಂಕ್ ಪೈಪ್ ಅನ್ನು ಜೋಡಣೆ ಮಾಡುವ ಈ ಕಾರ್ಯ ನಿನ್ನೆ ಮಧ್ಯಾಹ್ನ 2.30ಕ್ಕೆ ಆರಂಭವಾಗಿ ಸಂಜೆ 5.30ವೇಳೆಗೆ ಸಂಪೂರ್ಣಗೊಂಡಿತು. ಮೊದಲು ಹಳೆಯ ಆಮ್ಲಜನಕ ಲಿಕ್ವಿಡ್ ಟ್ಯಾಂಕ್ ನ ಎಲ್ಲ ಆಕ್ಸಿಜನ್ ಬೆಡ್ ಗಳ ಸಂಪರ್ಕ ತಪ್ಪಿಸಲಾಯಿತು. ಈ ಸಂದರ್ಭದಲ್ಲಿ ಆಕ್ಸಿಜನ್ ಪೂರೈಕೆಗೆ 250 ಜಂಬೊ ಸಿಲಿಂಡರ್ ಅನ್ನು ಅಳವಡಿಕೆ ಮಾಡಲಾಗಿತ್ತು. ಬಳಿಕ ಹಳೆಯ ಆಮ್ಲಜನಕ ಲಿಕ್ವಿಡ್ ಟ್ಯಾಂಕ್ ಗೆ ಹೊಸ ಆಮ್ಲಜನಕ ಲಿಕ್ವಿಡ್ ಟ್ಯಾಂಕ್ ಪೈಪ್ ಅನ್ನು ಜೋಡಣೆ ಮಾಡಲಾಯಿತು. ಬಳಿಕ ಸೋರಿಕೆ ಬಗ್ಗೆ ತಜ್ಞರ ತಂಡ ಪರಿಶೀಲನೆ ನಡೆಸಿತು.
ಈ ಸಂದರ್ಭ ಒಮ್ಮೆ ಆಸ್ಪತ್ರೆ ಬೆಡ್ ನ ಪೈಪ್ ಗೆ ಆಕ್ಸಿಜನ್ ಪೂರೈಕೆ ಆಗದೇ ಸೈರನ್ ಮೊಳಗಿದೆ. ತಕ್ಷಣ ತಂಡ ಎರಡೂ ಆಮ್ಲಜನಕ ಲಿಕ್ವಿಡ್ ಟ್ಯಾಂಕ್ ಸಂಪರ್ಕವನ್ನು ಮರುಜೋಡಣೆ ಮಾಡುವಲ್ಲಿ ಯಶಸ್ವಿಯಾಗಿದೆ.
ಈ ಕಾರ್ಯಾಚರಣೆ ನಡೆಯುವ ಸಂದರ್ಭ ವೆನ್ಲಾಕ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಬೆಡ್ ನಲ್ಲಿದ್ದ ರೋಗಿಗಳಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಹೊಸ ಸಂಪರ್ಕವನ್ನು ಅತ್ಯಂತ ಎಚ್ಚರಿಕೆಯಿಂದ ಅಳವಡಿಸಲಾಗಿತ್ತು. ಕಾರ್ಯಾಚರಣೆ ಸಂದರ್ಭ ಆಕ್ಸಿಜನ್ ವ್ಯತ್ಯಾಸವಾಗಿ ಆಕ್ಸಿಜನ್ ಬೆಡ್ ನಲ್ಲಿರುವ ರೋಗಿಗಳಿಗೆ ತೊಂದರೆಯಾದಲ್ಲಿ ತಕ್ಷಣ ಸಾಗಾಟಕ್ಕೆ ಸಾಕಷ್ಟು ಆ್ಯಂಬುಲೆನ್ಸ್ ವ್ಯವಸ್ಥೆಯನ್ನು ಮಾಡಲಾಗಿತ್ತು. ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಗಳ ಕಾಯ್ದಿರಿಸುವಿಕೆ ಮಾಡಲಾಗಿತ್ತು.