ಹದಿಮೂರನೇ ಶತಮಾನದ ಕನ್ನಡ ಕವಿ ಜನ್ನನ ಯಶೋಧರ ಚರಿತೆ ಆಧರಿಸಿ, ಮರು ವ್ಯಾಖ್ಯಾನದ ಮೂಲಕ ಮರು ಸೃಷ್ಟಿರೂಪದಲ್ಲಿ ನಿರ್ಮಾಣಗೊಂಡ ಅಮೃತ ಮತಿ ಕನ್ನಡ ಚಿತ್ರಕ್ಕೆ ವಿದೇಶಿ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಅಪಾರ ಮನ್ನಣೆ ಸಿಗುತ್ತಿದೆ.
ಸ್ಯಾಂಡಲ್ವುಡ್ ಬ್ಯೂಟಿ ಅಂತಾ ಕರೆಯಿಸಿಕೊಂಡಿರುವ ಹರಿಪ್ರಿಯ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರಕ್ಕೆ ಅತ್ಯುತ್ತಮ ಚಿತ್ರ ಪ್ರಶಸ್ತಿ ಬಂದಿದೆ. ಹರಿಪ್ರಿಯಾ ಜೊತೆಗೆ ಕಿಶೋರ್, ತಿಲಕ್, ಸುಂದರ್ ರಾಜ್, ಪ್ರಮೀಳಾ ಜೋಷಾಯ್, ಸುಪ್ರಿಯಾರಾವ್, ಅಂಬರೀಶ್ ಸಾರಂಗಿ, ವತ್ಸಲಾ ಮೋಹನ್ ಮುಂತಾದವರು ಅಭಿನಯಿಸಿದ್ದಾರೆ.
ಇಲ್ಲಿವರೆಗೆ ಹತ್ತು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಿಗೆ ಆಯ್ಕೆಯಾಗಿದೆ. ಇತ್ತೀಚೆಗೆ ಜರುಗಿದ ಲಾಸ್ ಏಂಜಲೀಸ್ ಸನ್ ಅಂತಾರಾಷ್ಟ್ರೀಯ ಚಿತ್ರೋತ್ಸವ’ದ ಸ್ಪರ್ಧಾ ವಿಭಾಗಕ್ಕೆ ಆಯ್ಕೆಯಾಗಿದ್ದ, `ಅಮೃತಮತಿ’ ಚಿತ್ರವು ಅತ್ಯುತ್ತಮ ಚಿತ್ರವೆಂಬ ಪ್ರಶಸ್ತಿಗೆ ಭಾಜನವಾಗಿದೆ. ಜೊತೆಗೆ ಚಿತ್ರಕತೆ (ಸ್ಕ್ರಿಪ್ಟ್) ರಚನೆಗಾಗಿ ನಿರ್ದೇಶಕ ಬರಗೂರು ರಾಮಚಂದ್ರಪ್ಪ ವೈಯಕ್ತಿಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಈ ಹಿಂದೆ ಅಟ್ಲಾಂಟ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ `ಅಮೃತಮತಿ’ಗೆ ಅತ್ಯುತ್ತಮ ವಿದೇಶಿ ಭಾಷಾ ಚಿತ್ರ ಪ್ರಶಸ್ತಿ ಲಭ್ಯವಾಗಿತ್ತು. ನಾಯಕಿ ಪಾತ್ರದ ಹರಿಪ್ರಿಯ ಅವರು ಎರಡು ಚಿತ್ರೋತ್ಸವಗಳಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದರು.
ಈ ಬಗ್ಗೆ ಮಾತನಾಡಿರುವ ನಿರ್ದೇಶಕ ಬರಗೂರು ರಾಮಚಂದ್ರಪ್ಪ, ನಾನು ನಿರ್ದೇಶಿಸಿದ ಕೆಲವು ಚಿತ್ರಗಳು ಉತ್ತಮ ಚಿತ್ರ ಪ್ರಶಸ್ತಿ ಪಡೆದಿವೆ. ನಿರ್ದೇಶನಕ್ಕಾಗಿ ನೀಡುವ ರಾಜ್ಯದ ಉನ್ನತ ಮನ್ನಣೆಯಾದ ಪುಟ್ಟಣ್ಣ ಕಣಗಾಲ್’ ಪ್ರಶಸ್ತಿ ಬಂದಿದೆ. ನಾನು ರಚಿಸಿದ ಕತೆ, ಗೀತೆ, ಸಂಭಾಷಣೆಗಳಿಗೂ ಪ್ರಶಸ್ತಿಗಳು ಲಭ್ಯವಾಗಿವೆ.
ಆದರೆ, ಇಲ್ಲೀವರೆಗೆ ನಾನು ರಚಿಸಿದ ಚಿತ್ರಕತೆಗೆ (ಸ್ಕ್ರಿಪ್ಟ್) ಒಂದೂ ಪ್ರಶಸ್ತಿ ಬಂದಿರಲಿಲ್ಲ. ಲಾಸ್ ಏಂಜಲೀಸ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಮೊಟ್ಟ ಮೊದಲ ಬಾರಿಗೆ ಚಿತ್ರಕತೆಗಾಗಿ ನನಗೆ ಪ್ರಶಸ್ತಿ ಬಂದಿರುವುದು ತುಂಬಾ ಸಂತೋಷತಂದಿದೆ. ಇದನ್ನು ನಮ್ಮ ಚಿತ್ರ ತಂಡಕ್ಕೆಅರ್ಪಿಸುತ್ತೇನೆ. ಈ ಮೂಲಕ ಇಡೀ ಚಿತ್ರತಂಡದ ಸಹಕಾರವನ್ನು ಗೌರವಿಸುತ್ತೇನೆ ಎಂದರು.
ಈ ಚಿತ್ರಕ್ಕೆ ನಾಗರಾಜ್ ಆದವಾನಿ ಛಾಯಾಗ್ರಹಣ, ಸುರೇಶ್ ಅರಸು ಸಂಕಲನ, ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನ, ತ್ರಿಭುವನ್ ನೃತ್ಯ ಸಂಯೋಜನೆಗಳಿವೆ. ಅಮೃತಮತಿ ಚಿತ್ರವು ಇಂಚರ ಪುಟ್ಟಣ್ಣ ಪ್ರೊಡಕ್ಷನ್ ಸಂಸ್ಥೆಯ ಪುಟ್ಟಣ್ಣನವರಿಂದ ನಿರ್ಮಾಣಗೊಂಡಿದೆ. ಮುಂಬೈನ ಸಂಸ್ಥೆಯೊಂದು ಪ್ರದರ್ಶನದ ಹಕ್ಕುಗಳನ್ನು ಪಡೆದಿದ್ದು ಕೊರೊನ ಕಡಿಮೆಯಾದ ಮೇಲೆ ಅಮೃತಮತಿ’ ಚಿತ್ರವು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.