ಕೊಳ್ಳೇಗಾಲ: ನಿಮ್ಮೂರಲ್ಲಿ ಕೊರೊನಾ ಇದೆ ನೀರು, ಪಡಿತರ ತೆಗೆದುಕೊಳ್ಳಲು ಬರಬೇಡಿ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ನಮಗೆ ತೊಂದರೆಯಾಗುತ್ತಿದೆ ಎಂದು ಹಳೆ ಅಣಗಳ್ಳಿ ಗ್ರಾಮಸ್ಥರು ಶಾಸಕ ಎನ್.ಮಹೇಶ್ ಬಳಿ ಅಳಲು ತೋಡಿಕೊಂಡಿದ್ದಾರೆ.
ತಾಲೂಕಿನ ಹರಳೆ ಗ್ರಾಮದ ಶಾಲಾ ಆವರಣದಲ್ಲಿ ಟಾಸ್ಕ್ ಪೋರ್ಸ್ ಸಭೆ ನಡೆಸಿದ ಬಳಿಕ ಶಾಸಕರಿಗೆ ಹಳೆ ಅಣಗಳ್ಳಿ ಗ್ರಾಮಸ್ಥರು ತಮಗಿರುವ ಸಮಸ್ಯೆಗಳನ್ನು ಹೇಳಿಕೊಂಡರು.
ಹಳೇ ಅಣಗಳ್ಳಿ ಹಾಗೂ ದಾಸನಪುರ ಗ್ರಾಮಕ್ಕೆ ಒಂದೇ ನ್ಯಾಯಬೆಲೆ ಅಂಗಡಿಯಿದ್ದು, ದಾಸನಪುರ ಗ್ರಾಮಸ್ಥರು ಪಡಿತರ ಪಡೆಯಲು ಹೋದರೆ ನಿಮ್ಮೂರಲ್ಲಿ ಕೊರೊನಾ ಇದೆ ನೀವು ಬರಬೇಡಿ ಎಂದು ಹೇಳುತ್ತಾರೆ. ಹರಳೆ ಗ್ರಾಮಕ್ಕೆ ನೀರು ತರಲು ಹೋದರೆ ಅಣಗಳ್ಳಿ ಗ್ರಾಮದಲ್ಲಿ ಸೋಂಕಿತರು ಇದ್ದಾರೆ ಆದ್ದರಿಂದ ನಮ್ಮೂರಿಗೂ ಹಬ್ಬುತ್ತದೆ ನೀವು ಬರಬೇಡಿ ಎನ್ನುತ್ತಾರೆ. ಪರಿಣಾಮ ಹಳೇ ಅಣಗಳ್ಳಿ ಗ್ರಾಮಸ್ಥರಿಗೆ ತೊಂದರೆಯಾಗಿದೆ. ದಯವಿಟ್ಟು ನಮ್ಮೂರಲ್ಲೂ ಒಂದು ನ್ಯಾಯ ಬೆಲೆ ಅಂಗಡಿ ತೆರೆಯಿರಿ ಎಂದು ಶಾಸಕ ಎನ್.ಮಹೇಶ್ಗೆ ಒತ್ತಾಯ ಮಾಡಿದ್ದಾರೆ.
ಬಳಿಕ ಸಮಸ್ಯೆ ಆಲಿಸಿದ ಶಾಸಕರು ಪ್ರತಿಕ್ರಿಯಿಸಿ, ತಹಶೀಲ್ದಾರ್ ಕುನಾಲ್ ಗೆ ಕೂಡಲೇ ಪಡಿತರ ಪಡೆಯಲು ಹಳೇ ಅಣಗಳ್ಳಿ ಗ್ರಾಮಸ್ಥರಿಗೆ ಪರ್ಯಾಯ ವ್ಯವಸ್ಥೆಮಾಡಿ ಎಂದು ಸೂಚನೆ ನೀಡಿದರು.