ನವದೆಹಲಿ: ಮೋದಿ ಸರ್ಕಾರದ ಪ್ರಥಮ ಅಧಿಕಾರಾವಧಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸಿದ್ದ ನಿತಿನ್ ಗಡ್ಕರಿ ಮತ್ತೊಮ್ಮೆ ಅದೇ ಹುದ್ದೆಯಲ್ಲಿ ಮುಂದಿನ ಐದು ವರ್ಷಕ್ಕೆ ಮುಂದುವರೆದಿದ್ದಾರೆ.
ಕಳೆದ ಐದು ವರ್ಷದಲ್ಲಿ ರಸ್ತೆ ನಿರ್ಮಾಣ ಹಾಗೂ ಅಭಿವೃದ್ಧಿ ವಿಚಾರದಲ್ಲಿ ಗಣನೀಯ ಬದಲಾವಣೆ ತಂದಿರುವ ನಿತಿನ್ ಗಡ್ಕರಿ ಮುಂದಿನ ಐದು ವರ್ಷಕ್ಕೆ ಭರ್ಜರಿ ಯೋಜನೆಯನ್ನು ಸಿದ್ಧಪಡಿಸಿದ್ದಾರೆ.
ಕಳೆದ ಅಧಿಕಾರಾವಧಿಯಲ್ಲಿ ಪ್ರತಿದಿನ 26 ಕಿ.ಮೀ ಹೊಸ ರಸ್ತೆ ನಿರ್ಮಾಣ ಮಾಡುವ ಯೋಜನೆ ಹಾಕಿಕೊಳ್ಳಲಾಗಿತ್ತು. ಆದರೆ ಮುಂದಿನ ಒಂದೂವರೆ ವರ್ಷದಲ್ಲಿ ಪ್ರತಿನಿತ್ಯ 40 ಕಿ.ಮೀ ರಸ್ತೆ ನಿರ್ಮಿಸುವ ಗುರಿ ಹೊಂದಿದ್ದೇವೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.
ರಸ್ತೆ ನಿರ್ಮಾಣದ ಜೊತೆಗೆ 125 ಕೋಟಿ ಗಿಡಗಳನ್ನು ನೆಡುವ ಯೋಚನೆ ನನ್ನ ಮುಂದಿದೆ. ಭಾರತದಲ್ಲಿ ಮಾಲಿನ್ಯದ ಪ್ರಮಾಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಈ ಯೋಜನೆ ಸಿದ್ಧಪಡಿಸಲಾಗಿದೆ ಎಂದು ಕೇಂದ್ರ ಸ್ತೆ ಸಾರಿಗೆ ಮತ್ತು ಹೆದ್ದಾರಿ ನಿತಿನ್ ಗಡ್ಕರಿ ಹೇಳಿದ್ದಾರೆ.