ಜೀ ಕನ್ನಡ ವಾಹಿನಿಯಲ್ಲಿ ಜೂನ್ 7ರಿಂದ ಹೊಸ ಧಾರಾವಾಹಿ “ನೇತಾಜಿ ಸುಭಾಷ್ ಚಂದ್ರ ಬೋಸ್” ಪ್ರಸಾರವಾಗಲಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 5ರಿಂದ 6 ಗಂಟೆವರೆಗೆ ಒಂದು ಗಂಟೆ ಕಾಲ ಪ್ರಸಾರವಾಗಲಿದೆ.
ಈ ಧಾರಾವಾಹಿ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಸ್ವತಃ ಸೈನ್ಯ ಕಟ್ಟಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ಧೀರ ನಾಯಕನ ಐತಿಹಾಸಿಕ ಕಥೆಯನ್ನು ಬಿಂಬಿಸುತ್ತದೆ. ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮದೇ ಹಾದಿ ತುಳಿದ ಅವರು ಜರ್ಮನಿಯ ನೆರವಿನೊಂದಿಗೆ “ಇಂಡಿಯನ್ ನ್ಯಾಷನಲ್ ಆರ್ಮಿ” ಕಟ್ಟಿದರು.
ಒರಿಸ್ಸಾದ ಕಟಕ್ನಲ್ಲಿ ಜನಿಸಿದ ಅವರು ತನ್ನ ತಂದೆಯ ಆಸೆಯಂತೆ ಇಂಡಿಯನ್ ಸಿವಿಲ್ ಸರ್ವೀಸ್ ಸೇರಲು ಬ್ರಿಟನ್ನಿಗೆ ಹೋದರೂ ನಂತರ ಭಾರತಕ್ಕೆ ಹಿಂದಿರುಗಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು. ಗಾಂಧಿಯವರ ಅಹಿಂಸಾ ಹೋರಾಟ ವಿರೋಧಿಸಿ ಸ್ವಂತ ಸೇನೆ ಕಟ್ಟಿದರು. ಅವರು ವಿಮಾನ ಅಪಘಾತದಲ್ಲಿ ಮೃತರಾದರು ಎಂದು ನಂಬಲಾಗಿದೆ. ಆದರೆ ಅದನ್ನು ಒಪ್ಪದೇ ಇರುವವರೂ ಬಹಳ ಮಂದಿ ಇದ್ದಾರೆ.
ಮತ್ತೆ ಸ್ವಾತಂತ್ರ್ಯ ಹೋರಾಟದ ಸ್ಫೂರ್ತಿಯ ಕಿಚ್ಚು ತುಂಬುವ ಈ ಧಾರಾವಾಹಿಯನ್ನು ವೀಕ್ಷಕರು ಈ ಹಿಂದಿನ ಎಲ್ಲಾ ಧಾರಾವಾಹಿಗಳಂತೆಯೇ ಆದರದಿಂದ ಸ್ವೀಕರಿಸುತ್ತಾರೆ ಎಂಬ ಭರವಸೆಯನ್ನು ಜೀ ಕನ್ನಡ ಹೊಂದಿದೆ ಎಂದು ತಿಳಿಸಿದೆ.