ಮೈಸೂರು: ಮೈಸೂರಿನ ಪ್ರತಿಷ್ಠಿತ 'ಸಂಗಮ್ 'ಥಿಯೇಟರ್ ಮುಚ್ಚಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಮಾಹಿತಿ ಹರಿದಾಡುತ್ತಿರುವುದರಿಂದ ಥಿಯೇಟರ್ ಮಾಲೀಕರು ಬೇಸರ ಹೊರಹಾಕಿದ್ದಾರೆ. ಅಲ್ಲದೆ, ಈ ಸಂಬಂಧ ಅವರು ಸ್ಪಷ್ಟನೆಯನ್ನು ನೀಡಿದ್ದಾರೆ.
ಕೊರೊನಾ ಅಲೆಯಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವುದರಿಂದ ಸಾಕಷ್ಟು ಚಿತ್ರಮಂದಿರಗಳು ಮುಚ್ಚಿವೆ. ಆದರೆ, ಸಂಗಮ್ ಚಿತ್ರಮಂದಿರವು ಮುಚ್ಚಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಎರಡು ದಿನಗಳಿಂದ ವಿಡಿಯೋ ಹರಿದಾಡುತ್ತಿದೆ. ಇದರಿಂದ ಥಿಯೇಟರ್ ಮಾಲೀಕ ರಾಜು ಬಿ.ಅರಸ್ ಹಾಗೂ ಸಿಬ್ಬಂದಿಗೆ ಸಾಕಷ್ಟು ಜನರು ಕರೆ ಮಾಡುತ್ತಿದ್ದಾರೆ. ಕಾಲ್ ಮಾಡಿದವರಿಗೆ ಮಾಲೀಕರು ಹಾಗೂ ಸಿಬ್ಬಂದಿ ಸಮಾಧಾನದಿಂದಲೇ ಉತ್ತರ ನೀಡುತ್ತಿದ್ದಾರೆ.
ಮೈಸೂರಿನಲ್ಲಿ ಶಾಂತಲ, ನಾಗರಾಜ್ ಹಾಗೂ ಲಕ್ಷ್ಮಿ ಥಿಯೇಟರ್ ಗಳು ಆರ್ಥಿಕ ಹೊರೆಯಿಂದ ಮುಚ್ಚಿವೆ. ಇದರ ಬೆನ್ನಲ್ಲೇ ಸಂಗಮ್ ಥಿಯೇಟರ್ ಕೂಡ ಮುಚ್ಚಲಿದೆ ಎಂಬ ಮಾಹಿತಿ ತಿಳಿದು ಸಿನಿ ಪ್ರಿಯರು ಬೇಸರಗೊಂಡಿದ್ದರು. ಆದರೆ, ಮಾಲೀಕರು ಥಿಯೇಟರ್ ಮುಚ್ಚುವುದಿಲ್ಲ ಎಂದು ಮಾಹಿತಿ ನೀಡಿರುವುದರಿಂದ ಸಿನಿ ಪ್ರೇಕ್ಷಕರಿಗೆ ತುಸು ಸಂತಸ ತಂದಿದೆ.