ಬೆಂಗಳೂರು: ವಸತಿ ಇಲಾಖೆ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನಗೊಂಡ ಆರ್.ಆರ್ ನಗರ ಶಾಸಕ ಮುನಿರತ್ನ ಹಾಗೂ ಸಚಿವ ವಿ.ಸೋಮಣ್ಣ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ವಿಕಾಸಸೌಧದಲ್ಲಿ ನಡೆದ ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಕೈಗೆತ್ತಿಕೊಳ್ಳಲಾಗಿರುವ '1 ಲಕ್ಷ ಬಹುಮಹಡಿ ವಸತಿ ಯೋಜನೆ’ಗೆ ಸರ್ಕಾರದ ಜಮೀನು ಹಸ್ತಾಂತರ ಕುರಿತಂತೆ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಮಾಹಿತಿ ಪಡೆದರು.
ಕಟ್ಟದ ಮನೆಗಳಿಗೆ ಬಿಲ್ ಪಾಸ್ ಮಾಡಿಸಿಕೊಂಡು ಗುತ್ತಿಗೆದಾರರು ಅಕ್ರಮ ಎಸಗುತ್ತಿದ್ದಾರೆ. ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಶಾಸಕ ಮುನಿರತ್ನ ಒತ್ತಾಯಿಸಿದರು.
ಆರು ವರ್ಷಗಳ ಹಿಂದೆ ಲೊಟ್ಟಗೊಲ್ಲಹಳ್ಳಿಯಲ್ಲಿದ್ದ ಕೊಳೆಗೇರಿಯನ್ನು ತೆರವುಗೊಳಿಸಲಾಗಿತ್ತು. ಆ ಸ್ಥಳದಲ್ಲಿ 1150 ಮನೆಗಳನ್ಮು ನಿರ್ಮಿಸಿ, ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಹಂಚಿಕೆ ಮಾಡಲು ಸರ್ಕಾರ ಉದ್ದೇಶಿಸಿತ್ತು. ಐಶ್ವರ್ಯಗಿರಿ ಕನ್ಸ್ಟ್ರಕ್ಷನ್ ಕಂಪನಿಗೆ ಮನೆ ನಿರ್ಮಾಣ ಗುತ್ತಿಗೆಯನ್ನು ನೀಡಲಾಗಿತ್ತು. ಮನೆಗಳ ನಿರ್ಮಾಣಕ್ಕೆ ಅಡಿಪಾಯ ಹಾಕಿದ್ದು ಬಿಟ್ಟರೆ ಗುತ್ತಿಗೆದಾರು ಬೇರೆ ಕಾಮಗಾರಿ ಮಾಡಲೇ ಇಲ್ಲ. ಸ್ಥಳೀಯ ಶಾಸಕರ ನೆರವಿನಿಂದ 450 ಫಲಾನುಭವಿಗಳು ಸ್ವಂತ ಖರ್ಚಿನಲ್ಲಿ ಮನೆ ಕಟ್ಟಿಕೊಂಡಿದ್ದಾರೆ. ಆದರೆ ಫಲಾನುಭವಿಗಳು ಸ್ವಂತ ಖರ್ಚಿನಲ್ಲಿ ಕಟ್ಟಿಕೊಂಡ ಮನೆಗಳನ್ನು ತಾವೇ ಕಟ್ಟಿರುವುದಾಗಿ ಹೇಳಿ ಗುತ್ತಿಗೆದಾರರು ದಾಖಲೆ ರೂಪಿಸಿ ಬಿಲ್ ನೀಡಿದ್ದಾರೆ. ಗುತ್ತಿಗೆದಾರರೊಂದಿಗೆ ಶಾಮೀಲಾಗಿರುವ ಅಧಿಕಾರಿಗಳು ಅವರಿಗೆ ಹಣಪಾವತಿ ಮಾಡಿದ್ದಾರೆ ಎಂದು ಶಾಸಕರು ಆರೋಪಿಸಿದರು.
ನನ್ನ ಕ್ಷೇತ್ರದಲ್ಲಿ ಕೊಳಚೆ ಅಭಿವೃದ್ಧಿ ಮಂಡಳಿಯಿಂದ ಮನೆಗಳನ್ನು ಕಟ್ಟಲು ವಿಳಂಬವಾಗ್ತಿದೆ. ಕೆಲವು ಕಡೆ ಅಡಿಪಾಯ ಹಾಕಿ ಮನೆ ಕಟ್ಟಲು ಹಣ ಬಿಡುಗಡೆ ಆಗಿಲ್ಲ. ಅಂತಹ ಕಡೆ ನಾನೇ ಸಹಾಯ ಮಾಡಿ, ಮನೆ ಕಟ್ಟಿಸಿ ಕೊಟ್ಟಿದ್ದೆ. ಅಲ್ಲಿ ಬೋಗಸ್ ಬಿಲ್ ಸೃಷ್ಟಿಸಿ ಹಣ ಗುಳುಂ ಮಾಡಿದ್ದಾರೆ ಎಂದು ಮುನಿರತ್ನ ಅವರು ಅಧಿಕಾರಿಗಳ ವಿರುದ್ಧ ದೂರಿನ ಸುರಿಮಳೆಗೈದರು.
ಈ ವೇಳೆ ಸಚಿವ ಸೋಮಣ್ಣ ಕೆಲಸ ಮಾಡದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಾಳೆಯೇ ಸ್ಥಳಕ್ಕೆ ತೆರಳಿ ವಾಸ್ತವಾಂಶ ಪರಿಶೀಲಿಸಿ. ಅವ್ಯವಹಾರ ಆಗಿದ್ದರೆ ತನಿಖೆ ನಡೆಸಿ ಎಂದು ತಾಕೀತು ಮಾಡಿದರು.
ಒಂದು ಲಕ್ಷದ ಬಹುಮಹಡಿ ಮನೆಗಳು ಯೋಜನೆ ಪ್ರಗತಿಯಲ್ಲಿದೆ. ಆಗಸ್ಟ್ 15ರ ಒಳಗೆ 5 ಸಾವಿರ ಮನೆಗಳನ್ನು ಬಡವರಿಗೆ ಹಂಚಿಕೆ ಮಾಡುತ್ತೇವೆ. ಸಿಎಂ ಕೈಯಿಂದ ಬಡವರಿಗೆ ಹಸ್ತಾಂತರ ಮಾಡುತ್ತೇವೆ. ಅಗತ್ಯ ಇರುವ ಬಡವರಿಗೆ ಮಾತ್ರ ಮನೆ ಸಿಗುವಂತೆ ಕಠಿಣ ಕ್ರಮಗಳನ್ನು ತೆಗೆದುಕೊಳ್ತೀವಿ. ಸೆಪ್ಟೆಂಬರ್ ತಿಂಗಳಿಗೆ ನಾನು ಸಚಿವನಾಗಿ 2 ವರ್ಷ ಆಗುತ್ತದೆ. ಇಲಾಖೆಯಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ಅಧಿಕಾರಿಗಳಿಗೆ ಬಡವರ ಪರ ಕೆಲಸ ಮಾಡಲು ಸೂಚಿಸಿದ್ದೇನೆ. ಬಡವರ ಪರ ಕೆಲಸ ಮಾಡುವವರಿಗೆ ಕೊರೊನಾ ಬಾಧಿಸುವುದಿಲ್ಲ ಎಂದು ಇದೇ ವೇಳೆ ಸಚಿವ ಸೋಮಣ್ಣ ಅಭಿಪ್ರಾಯಪಟ್ಟರು.