ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ದಾಸರಹಳ್ಳಿ ವಲಯದ ಬಾಗಲಗುಂಟೆ ವಾರ್ಡ್ ಸಂಖ್ಯೆ-14ರಲ್ಲಿ ಬರುವ ಕಾರ್ಮಿಕ ಭವನದಲ್ಲಿ ಕೋವಿಡ್ ಆರೈಕೆ ಕೇಂದ್ರಕ್ಕೆ ಕಂದಾಯ ಸಚಿವ ಆರ್.ಅಶೋಕ್ ಚಾಲನೆ ನೀಡಿದರು.
ಈ ವೇಳೆ ದಾಸರಹಳ್ಳಿ ವಲಯ ಕೋವಿಡ್ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಸ್ಥಳೀಯ ಶಾಸಕ ಮಂಜುನಾಥ್, ಆಡಳಿತಗಾರ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ಗೌರವ್ ಗುಪ್ತ ಭಾಗಿಯಾಗಿದ್ದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಈಗಾಗಲೇ 12 ಕೋವಿಡ್ ಆರೈಕೆ ಕೇಂದ್ರಗಳನ್ನು ತೆರೆಯಲಾಗಿದ್ದು, ದಾಸರಹಳ್ಳಿ ವಲಯದ ಕಾರ್ಮಿಕ ಭವನದಲ್ಲಿ ಇಂದು 127 ಹಾಸಿಗೆ ಸಾಮರ್ಥ್ಯದ ಕೋವಿಡ್ ಆರೈಕೆ ಕೇಂದ್ರವನ್ನು ತೆರೆಯಲಾಗಿದ್ದು, ಅದರಲ್ಲಿ 10 ಆಕ್ಸಿಜನ್ ಹಾಸಿಗೆಗಳನ್ನು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವರು ತಿಳಿಸಿದರು.
ಕೋವಿಡ್ ಆರೈಕೆ ಕೇಂದ್ರಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಚಿವರು, ಕಾರ್ಮಿಕ ಭವನದಲ್ಲಿ ಕೋವಿಡ್ ಆರೈಕೆ ಕೇಂದ್ರ ಸುಸಜ್ಜಿತವಾಗಿದ್ದು, ವೈದ್ಯರು ಹಾಗೂ ಸಿಬ್ಬಂದಿಯನ್ನು ಎರಡು ಪಾಳಿಯಲ್ಲಿ ನಿಯೋಜನೆ ಮಾಡಲಾಗಿದೆ. ಒಂದು ಪಾಳಿಯಲ್ಲಿ 14 ಮಂದಿ ಕೆಲಸ ಮಾಡಲಿದ್ದಾರೆ. ಸೋಂಕಿತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಶೌಚಾಲಯ, ಸ್ನಾನದ ಕೊಠಡಿ, ಅಡುಗೆ ವ್ಯವಸ್ಥೆ, ಊಟ ಮಾಡುವ ಕೊಠಡಿ, ಮನರಂಜನಾ ಕೊಠಡಿ ಸೇರಿದಂತೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ಸೋಂಕು ದೃಢಪಟ್ಟು ಅಸಿಮ್ಟಮ್ಯಾಟಿಕ್ ಇದ್ದು ಮನೆಯಲ್ಲಿ ಉಳಿಯಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಇಲ್ಲದಿರುವವರು ಕೋವಿಡ್ ಆರೈಕೆ ಕೇಂದ್ರಗಳಿಗೆ ಬಂದು ಆರೈಕೆ ಪಡೆಯಿರಿ ಎಂದರು.
ನಗರದಲ್ಲಿ ಕೋವಿಡ್ ದೃಢಪಟ್ಟವರು ಮೊಬೈಲ್ ಸ್ವಿಚ್ ಆಫ್ ಮಾಡಿಕೊಳ್ಳುತ್ತಿದ್ದು, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡವರ ಟ್ರಾಕಿಂಗ್ಅನ್ನು ಪೋಲೀಸರು ಮಾಡುತ್ತಿದ್ದಾರೆ. ತೀರಾ ಉಸಿರಾಟದ ಸಮಸ್ಯೆ ಆದಾಗ ಆಸ್ಪತ್ರೆಗಳಲ್ಲಿ ಐಸಿಯು ಹಾಸಿಗೆ ಬೇಕೆಂದು ಬರುತ್ತಿದ್ದಾರೆ. ಮುಂಚಿತವಾಗಿಯೇ ಕೋವಿಡ್ ಪಾಸಿಟಿವ್ ಎಂದು ತಿಳಿದ ತಕ್ಷಣ ಐಸೋಲೇಟ್ ಆಗಿ ಔಷಧ, ಮಾತ್ರೆಗಳನ್ನು ಸರಿಯಾಗಿ ತೆಗೆದುಕೊಂಡಾಗ ಕೋವಿಡ್ ಸೋಂಕು ಹರಡುವುದನ್ನು ತಡೆಯಬಹುದಾಗಿದೆ. ಅಗತ್ಯಕ್ಕನುಗುಣವಾಗಿ ಇನ್ನೂ ಹೆಚ್ಚಿನ ಕೋವಿಡ್ ಆರೈಕೆ ಕೇಂದ್ರಗಳನ್ನು ತೆಗೆಯಲು ಕ್ರಮ ವಹಿಸಲಾಗುವುದು ಎಂದರು.
ಇದನ್ನೂ ಓದಿ: ರೈತರಿಗೆ ಮತ್ತೆ ಅನುಕೂಲ ಕಲ್ಪಿಸಲು ಅಗ್ರಿ ವಾರ್ ರೂಮ್ ಆರಂಭ: ಸಚಿವ ಬಿ.ಸಿ.ಪಾಟೀಲ್