ಬೆಂಗಳೂರು: ಸ್ವಂತ ತೋಟ, ಜಮೀನಿನಲ್ಲೂ ಕೋವಿಡ್ನಿಂದ ಮೃತರಾದವರ ಅಂತ್ಯ ಸಂಸ್ಕಾರ ಮಾಡಲು ಅನುಮತಿ ನೀಡಲು ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ವಿಕಾಸೌಧದಲ್ಲಿ ಮಾತನಾಡಿದ ಅವರು, ಚಿತಾಗಾರದ ಮುಂದೆ ಹಲವು ಆ್ಯಂಬ್ಯುಲೆನ್ಸ್ ನಿಲ್ಲುತ್ತಿವೆ. ತಾವರೆಕರೆ ಬಳಿ ತಾತ್ಕಾಲಿಕವಾಗಿ 4 ಎಕರೆ ಜಾಗದಲ್ಲಿ ಸುಡುವುದಕ್ಕೆ ವ್ಯವಸ್ಥೆ ಮಾಡಿದ್ದೇವೆ. ನಾಳೆ ಬೆಳಗ್ಗೆಯಿಂದ 50-60 ಮೃತದೇಹಗಳನ್ನು ಸಾಂಪ್ರದಾಯಿಕವಾಗಿ ಸುಡುವುದಕ್ಕೆ ವ್ಯವಸ್ಥೆ ಮಾಡಿದ್ದೇವೆ. ನೀಲಗಿರಿ ತೋಪು ಖರೀದಿ ಮಾಡಿ ಕಟ್ಟಿಗೆ ಸಂಗ್ರಹ ಕೂಡ ಮಾಡ್ತಿದ್ದೇವೆ. ಅವರವರ ತೋಟ, ಜಮೀನಿನಲ್ಲೂ ಮಾರ್ಗಸೂಚಿ ಪ್ರಕಾರ ಶವ ಸಂಸ್ಕಾರ ಮಾಡಲು ಅವಕಾಶ ನೀಡಲು ಸೂಚನೆ ನೀಡಿದ್ದೇವೆ ಎಂದು ತಿಳಿಸಿದರು.
ಎಲ್ಲೆಲ್ಲಿ ನ್ಯೂನತೆ ಕಂಡುಬಂದಿದೆ ಅದನ್ನು ಬಗೆಹರಿಸಲು ಅಧಿಕಾರಿಗಳಿಗೆ ಜವಾಬ್ದಾರಿ ನೀಡಿದ್ದೇವೆ. ಸಂಜೆ 4 ಗಂಟೆಗೆ ಸಿಎಂ ನೇತೃತ್ವದಲ್ಲಿ ಮೀಟಿಂಗ್ ಮಾಡಲಿದ್ದೇವೆ. ಸಚಿವರು, ಅಧಿಕಾರಿಗಳು ಮೀಟಿಂಗ್ನಲ್ಲಿ ಭಾಗಿಯಾಗ್ತಾರೆ ಎಂದು ಸ್ಪಷ್ಟಪಡಿಸಿದರು.
ಆ್ಯಂಬ್ಯುಲೆನ್ಸ್ ಡ್ರೈವರ್ಗಳು ಹೆಚ್ಚಿನ ದುಡ್ಡು ವಸೂಲಿ ಮಾಡಿದರೆ ಅಂಥವರನ್ನು ಅರೆಸ್ಟ್ ಮಾಡುತ್ತೇವೆ. ನಿನ್ನೆ ಹೆಬ್ಬಾಳದ ಅಂಬ್ಯುಲೆನ್ಸ್ ಡ್ರೈವರ್ ಹೆಚ್ಚು ದುಡ್ಡು ವಸೂಲಿ ಮಾಡಿದ್ದ ಘಟನೆ ನಡೆದಿತ್ತು. ಅವನ ಪತ್ತೆ ಹಚ್ಚಿ ಅರೆಸ್ಟ್ ಮಾಡುವುದಕ್ಕೆ ಡಿಸಿಪಿ ಬಾವಾಗೆ ಹೇಳಲಾಗಿದೆ. ಗೃಹ ಸಚಿವರೊಂದಿಗೂ ಮಾತನಾಡಿದ್ದೇನೆ ಎಂದರು.
ಹೊರಗಡೆಯಿಂದ ಮೃತದೇಹಗಳನ್ನು ತರುತ್ತಿರುವುದು ಚಿತಾಗಾರದಲ್ಲಿ ಮೃತದೇಹಗಳು ದಿಢೀರ್ ಆಗಿ ಹೆಚ್ಚಳ ಆಗೋದಕ್ಕೆ ಕಾರಣವಾಗಿದೆ. ಬೆಂಗಳೂರು ಸುತ್ತಮುತ್ತಲಿನ 20 ಕಿ.ಮೀ.ನಿಂದ ಎಲ್ಲರೂ ಶವ ಸಂಸ್ಕಾರಕ್ಕೆ ಇಲ್ಲಿಗೇ ಬರುತ್ತಿದ್ದಾರೆ. ಸುಡಬೇಕು ಅನ್ನುವ ಕಾರಣಕ್ಕೆ ಇಲ್ಲಿಗೇ ತರುತ್ತಿದ್ದಾರೆ. ಹೀಗಾಗಿ ಚಿತಾಗಾರಗಳಲ್ಲಿ ಶವಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ತಿಳಿಸಿದರು.