ಮಹದೇವಪುರ(ಬೆಂಗಳೂರು): ಮಹದೇವಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೋವಿಡ್-19 ನಿಯಂತ್ರಣ ಕ್ರಮಗಳನ್ನು ಪರಿಶೀಲಿಸುವ ಸಲುವಾಗಿ ಸಚಿವರಾದ ಬೈರತಿ ಬಸವರಾಜ್ ಮತ್ತು ಅರವಿಂದ ಲಿಂಬಾವಳಿ ಅವರು ಬಿಬಿಎಂಪಿ ಅಧಿಕಾರಿಗಳು, ಆರೋಗ್ಯ ಇಲಾಖೆ ಹಾಗೂ ಇನ್ನಿತರ ಇಲಾಖೆಗಳ ಉನ್ನತಾಧಿಕಾರಿಗಳ ಸಭೆ ನಡೆಸಿದ್ದಾರೆ.
ಐಟಿಪಿಎಲ್ ಮುಖ್ಯ ರಸ್ತೆಯ ಖಾಸಗಿ ಹೋಟೆಲ್ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕೊರೊನಾ ನಿಯಂತ್ರಣ ಮಾಡುವಲ್ಲಿ ಕಳೆದ ಒಂದು ವಾರದಿಂದ ಕೈಗೊಂಡ ಕ್ರಮಗಳ ಕುರಿತು ಚರ್ಚಿಸಲಾಯಿತು. ಸಭೆಯಲ್ಲಿ ಕೋವಿಡ್ ಸೋಂಕಿತರ ಸಲುವಾಗಿ ಒದಗಿಸುತ್ತಿರುವ ಸೌಲಭ್ಯಗಳು, ಆಸ್ಪತ್ರೆಗಳಲ್ಲಿ ಇರುವ ಐಸಿಯು, ಹೆಚ್ಡಿಯು, ವೆಂಟಿಲೇಟರ್ ಗಳ ಸಂಖ್ಯೆ, ಸದ್ಯ ಲಭ್ಯವಿರುವ ಹಾಸಿಗೆಗಳ ಅಂಕಿಅಂಶವನ್ನು ಪಡೆದುಕೊಳ್ಳಲಾಯಿತು. ಕೋವಿಡ್ ನಿಯಂತ್ರಣಕ್ಕಾಗಿ ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಲಾಯಿತು.
ಮಹದೇವಪುರ ವಲಯದ 17 ವಾರ್ಡ್ ಮತ್ತು 11 ಗ್ರಾಮ ಪಂಚಾಯತ್ಗಳಿಗೆ ನೇಮಕ ಮಾಡಿದ್ದ ಅಧಿಕಾರಿಗಳ ಬಳಿ, ಕಳೆದ ಒಂದು ವಾರದಿಂದ ತಮ್ಮ ವ್ಯಾಪ್ತಿಯಲ್ಲಿ ಎಷ್ಟು ಕೇಸುಗಳು ಬಂದಿವೆ, ಹೆಚ್ಚಾಗಿದೆಯಾ, ಕಡಿಮೆ ಆಗಿದೆಯಾ, ಇದಕ್ಕೆ ಕಾರಣಗಳು ಏನು, ಯಾವ ರೀತಿ ಕ್ರಮಗಳನ್ನ ಕೈಗೊಳ್ಳಲಾಗಿದೆ ಎಂದು ವಿಚಾರಿಸಿದರು. ಪ್ರತಿಯೊಂದು ವಾರ್ಡ್ ಮತ್ತು ಪಂಚಾಯಿತಿಗಳಿಗೆ ವೈದ್ಯರನ್ನ ನೇಮಕ ಮಾಡುವಂತೆ ಸಚಿವರು ಸೂಚಿಸಿದರು.
ಸಭೆಯ ನಂತರ ಮಹದೇವಪುರದ ಕೋವಿಡ್ ವಾರ್ ರೂಂ ಗೆ ಭೇಟಿ ನೀಡಿ ಬೆಡ್ ಲಾಕ್ಗಳ ಬಗ್ಗೆ ವಿಚಾರಿಸಿದರು. ಮಹದೇವಪುರ ವಲಯದಲ್ಲಿ ವಾರ್ ರೂಂ ಗಳು ಆಸ್ಪತ್ರೆ ಬೆಡ್ ಗಳ ಮಾಹಿತಿ ಪಡೆದರು. ಈ ಬಗ್ಗೆ ಅಧಿಕಾರಿಗಳಿಗೆ ಸಚಿವ ಅರವಿಂದ ಲಿಂಬಾವಳಿ ಸಲಹೆ ಸೂಚನೆಗಳನ್ನ ನೀಡಿದರು.
ಸಭೆಯಲ್ಲಿ ಪ್ರಮುಖವಾಗಿ ಹೋಂ ಕ್ವಾರಂಟೈನ್ ಬಗ್ಗೆ ಅಧಿಕಾರಿಗಳು ಹೆಚ್ಚು ಒತ್ತು ನೀಡಬೇಕು. ಹೋಂ ಕ್ವಾರಂಟೈನ್ ಇರುವವರು ಮನೆಯಲ್ಲೇ ಚಿಕಿತ್ಸೆ ಪಡೆಯಲು ಅನುಕೂಲ ಇದ್ದರೆ ಮಾತ್ರ ಅನುಮತಿ ನೀಡಬೇಕು. ಮನೆಯಲ್ಲಿ ಒಂದೇ ಶೌಚಾಲಯ ಇದ್ದಲ್ಲಿ ಅಂತವರನ್ನ ಕೋವಿಡ್ ಕೇರ್ ಸೆಂಟರ್ ಕಳುಹಿಸಿ. ಅವರಿಂದ ಬೇರೆ ಯಾರಿಗೂ ಹರಡಬಾರದು ಎಂದರು.
ಮನೆಯಲ್ಲಿ ಚಿಕಿತ್ಸೆ ಪಡೆಯುವವರನ್ನ ಡಾಕ್ಟರ್ಗಳು ಮೂರು ದಿನಕ್ಕೆ ಒಂದು ಸಾರಿ ಭೇಟಿ ಮಾಡಿ, ಸರಿಯಾಗಿ ಮೆಡಿಸಿನ್ಗಳನ್ನ ಪಡೆಯುತ್ತಿದ್ದರಾ ಎಂದು ನೋಡಿಕೊಳ್ಳಬೇಕು. ಯಾವುದೇ ಗ್ರಾಮದಲ್ಲಿ ಐದಕಿಂತ ಹೆಚ್ಚು ಪ್ರಕರಣಗಳು ಕಂಡುಬಂದರೆ ಸೀಲ್ ಡೌನ್ ಮಾಡಿ ಎಂದರು.
ಸೋಂಕು ಬಂದ ಕೂಡಲೇ ಸೋಂಕಿತ ವ್ಯಕ್ತಿಯನ್ನ ಭೇಟಿ ಮಾಡಿ ಆರೋಗ್ಯ ವಿಚಾರಿಸಿ, ಆಸ್ಪತ್ರೆ ಅವಶ್ಯಕತೆ ಇದ್ದರೆ ಆಸ್ಪತ್ರೆಗೆ ಕಳುಹಿಸಿ, ಆರೋಗ್ಯ ಸ್ಥಿರವಾಗಿರುವವರನ್ನ ಕೋವಿಡ್ ಕೇರ್ ಸೆಂಟರ್ಗೆ ಕಳುಹಿಸಿ ಎಂದು ಸೂಚಿಸಿದರು.
ಅಧಿಕಾರಿಗಳು ಎರಡು ತಿಂಗಳು ಕಷ್ಟ ಪಟ್ಟು ಕೆಲಸ ಮಾಡಿದರೆ ನಮ್ಮ ವಲಯದಲ್ಲಿ ಕೊರೊನಾ ನಿಯಂತ್ರಣ ಮಾಡಬಹುದು. ಕೆಲವು ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ , ಇನ್ನೂ ಕೆಲವರು ಬೇಕಾಬಿಟ್ಟಿ ಮಾಡುತ್ತಿದ್ದಾರೆ. ಅಂತವರ ಬಗ್ಗೆ ಮುಂದಿನ ದಿನಗಳಲ್ಲಿ ಕಠಿಣ ಕ್ರಮಗಳನ್ನ ಕೈಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಕೋವಿಡ್ ಕೇರ್ ಸೆಂಟರ್ಗಳನ್ನ ಹೆಚ್ಚು ಮಾಡಿ ಎಂದು ಅಧಿಕಾರಿಗೆ ಸೂಚನೆ ನೀಡಿದರು.