ಕಲಬುರಗಿ: ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಸುಬೋಧ ಯಾದವ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ, ನೀರಿನ ಬವಣೆ ತಪ್ಪಿಸುವ ಉದ್ದೇಶದಿಂದ ಭೀಮಾ ನದಿಗೆ ನೀರು ಹರಿಸಲು ಮಹಾರಾಷ್ಟ್ರದೊಂದಿಗೆ ಒಪ್ಪಂದಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧಾರ ಕೈಗೊಳ್ಳಲಾಗಿದೆ.
ಕಳೆದ ಕೆಲ ವರ್ಷಗಳಿಂದ ನಿರಂತರ ಬರಗಾಲಕ್ಕೆ ತುತ್ತಾಗುತ್ತಿರುವ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಮಳೆಗಾಲದಲ್ಲಿಯೂ ಕುಡಿಯುವ ನೀರಿಗೆ ಪರಿತಪಿಸುವಂತಾಗಿದೆ. ಈ ಜಿಲ್ಲೆಗಳ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಮಹಾರಾಷ್ಟದಿಂದ ಭೀಮಾ ನದಿಗೆ 2 ಟಿ.ಎಂ.ಸಿ. ನೀರನ್ನು ಕೊಡುವಿಕೆ ಮತ್ತು ಪಡೆಯುವಿಕೆ ಒಪ್ಪಂದದ ಅಧಾರದ ಮೇಲೆ ಬಿಡುಗಡೆಗೊಳಿಸಲು ರಾಜ್ಯ ಸರ್ಕಾರವು ಮಹಾರಾಷ್ಟ್ರದೊಂದಿಗೆ ಒಪ್ಪಂದ ಮಾಡಿಕೊಳ್ಳುವಂತೆ ಪ್ರಸ್ತಾವನೆ ಸಲ್ಲಿಸಲು ಸುಬೋಧ ಯಾದವ ತಿಳಿಸಿದರು.
ಕರ್ನಾಟಕ ನೀರಾವರಿ ನಿಗಮ ನಿಯಮಿತ ಕಲಬುರಗಿ ವಲಯ ವ್ಯಾಪ್ತಿಯಲ್ಲಿ ಬರುವ ಕಲಬುರಗಿ, ಬೀದರ್ ಮತ್ತು ಯಾದಗಿರಿ ಜಿಲ್ಲೆಗಳ ಜಲಾಶಯಗಳ ಪ್ರಸ್ತುತ ಸ್ಥಿತಿಗತಿ ಕುರಿತು ನೀರಾವರಿ ನಿಗಮದ ಅಧಿಕಾರಿಗಳೊಂದಿಗೆ ಚರ್ಚಿಸಿದ ಅವರು, ಬೇಸಿಗೆ ಸಂದರ್ಭದಲ್ಲಿ ಜಿಲ್ಲೆಯಲ್ಲಿನ ಕುಡಿಯುವ ನೀರಿಗೆ ಪರಿಹಾರ ಕಲ್ಪಿಸಲು ಭೀಮಾ ನದಿಗೆ 2 ಟಿ.ಎಂ.ಸಿ. ನೀರನ್ನು ಮಹಾರಾಷ್ಟ್ರದಿಂದ ಬಿಡುವುದು, ಅಷ್ಟೆ ಪ್ರಮಾಣದ ನೀರನ್ನು ರಾಜ್ಯದ ಆಲಮಟ್ಟಿ ಜಲಾಶಯದಿಂದ ಮಹಾರಾಷ್ಟ್ರಕ್ಕೆ ಬಿಡುವುದನ್ನು ಒಪ್ಪಂದದಲ್ಲಿ ಉಲ್ಲೇಖಿಸಬೇಕು ಆಗ ಸಮಸ್ಯೆ ಪರಿಹಾರವಾಗುವುದೆಂದು ತಿಳಿಸಿದರು.
ಈ ರೀತಿಯ ಒಪ್ಪಂದ ಆದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಲಿದೆ. ಇದಲ್ಲದೆ ಆಮಲಟ್ಟಿಯಿಂದ ನಾರಾಯಣಪುರ ಜಲಾಶಯದ ಮೂಲಕ ಕಲಬುರಗಿ ಮತು ಯಾದಗಿರಿ ಜಿಲ್ಲೆಗೆ ಪ್ರತಿ ವರ್ಷ ಕುಡಿಯುವ ನೀರಿಗಾಗಿ 2 ಟಿ.ಎಂ.ಸಿ. ನೀರು ಹಂಚಿಕೆ ಮಾಡಲು ವಾರ್ಷಿಕ ಕ್ರಿಯಾ ಯೋಜನೆಯಲ್ಲಿ ಸೇರಿಸಲು ಸಹ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.