ಬೆಂಗಳೂರು: ಒಂದಲ್ಲ, ಎರಡಲ್ಲ ಬರೋಬ್ಬರಿ ನಾಲ್ಕು ಮದುವೆಯಾದ ಶಿಕ್ಷಕ ಈಗ ಮುದ್ದೆ ಮುರಿಯುತ್ತಿದ್ದಾನೆ. ಪತ್ನಿಯರ ಜತೆ ಕೆಲ ವರ್ಷ ಕಳೆದು ದೂರ ಮಾಡುತ್ತಿದ್ದ. ನಾಲ್ಕನೇ ಮದುವೆಯಾದ ಮೂರನೇ ದಿನಕ್ಕೆ ಈತನ ಬಣ್ಣ ಬಯಲಾಗಿದೆ.
ಯುವತಿಯರನ್ನು ವಂಚಿಸಿದ ಆರೋಪದಡಿ ಆರೋಪಿ ಅಮಾನುಲ್ಲಾ ಬಾಷಾ (29) ಎಂಬಾತನನ್ನು ಪೊಲೀಸು ಕಂಬಿ ಹಿಂದೆ ತಳ್ಳಿದ್ದಾರೆ.
ಹೌದು, ಮೂಲತಃ ತಮಿಳುನಾಡಿನ ಮಧುರೈ ನಿವಾಸಿಯಾಗಿರುವ ಅಮಾನುಲ್ಲಾ, ವೃತ್ತಿಯಲ್ಲಿ ದುಬೈನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಶಿಕ್ಷಕನಾಗಿದ್ದಾನೆ. ಅಲ್ಲಿಯೇ ವಾಸವಾಗಿದ್ದ ಈತ ಆಗಾಗ ಬೆಂಗಳೂರಿಗೆ ಬಂದು ವರದಕ್ಷಿಣೆ ಆಸೆಗೆ ಮದುವೆಯಾಗಿ ದುಬೈಗೆ ಹಾರುತ್ತಿದ್ದ. ಕೆ.ಜಿ ಹಳ್ಳಿಯ ನಿವಾಸಿವೋರ್ವರ ಮಗಳನ್ನ ಮೇ ತಿಂಗಳು 23ರಂದು ಅದ್ಧೂರಿಯಾಗಿ ನಾಲ್ಕನೇ ಮದುವೆ ಮಾಡಿಕೊಂಡಿದ್ದ. ಜೊತೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮದುವೆ ಮಾಡಿಕೊಡಲಾಗಿತ್ತು. ನಂತರ ಅಮಾನುಲ್ಲಾ ಬಾಷಾ ಹೆಂಡತಿಯ ಜೊತೆ ತಮಿಳುನಾಡಿನ ಮಧುರೈಗೆ ತೆರಳಿದ್ದ.
ಯುವತಿ ಮದುವೆ ಫೋಟೊಗಳನ್ನ ತನ್ನ ಫೇಸ್ಬುಕ್, ವಾಟ್ಸ್ಯಾಪ್ನಲ್ಲಿ ಶೇರ್ ಮಾಡಿದ್ದಳು. ಫೋಟೊ ನೋಡಿದ ಸಂಬಂಧಿಕರು ಯುವತಿಯ ಪೋಷಕರಿಗೆ ಕರೆ ಮಾಡಿ, ಈ ಹುಡುಗನಿಗೆ ಮೊದಲೇ ಮದುವೆ ಆಗಿದೆ ಎಂದು ತಿಳಿಸಿದ್ದರು. ಆಗ ಗಾಬರಿಗೊಂಡ ಯುವತಿಯ ಪೋಷಕರು ಸಂಬಂಧಿಕರ ಮೂಲಕ ವಿಚಾರಿಸಿದಾಗ ಆರೋಪಿ ಅಮಾನುಲ್ಲಾ ಬಾಷಾನ ನಿಜ ಬಣ್ಣ ಬಯಲಿಗೆ ಬಂದಿದೆ.
ನಾಲ್ಕನೇ ಯುವತಿಯ ಪೋಷಕರು ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿ, ಆರೋಪಿಯನ್ನ ನಗರಕ್ಕೆ ಕರೆಸಿದ್ದಾರೆ. ಕೆ.ಜಿ ಹಳ್ಳಿ ಠಾಣೆಯಲ್ಲಿ ಆರೋಪಿಯನ್ನ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಪೋಲಿ ಶಿಕ್ಷಕನ ಕೈಗೆ ಈಗ ಕೋಳ ತೊಡಿಸಿ ತನಿಖೆ ಆರಂಭಿಸಿದ್ದಾರೆ.