ನವದೆಹಲಿ/ಬೆಂಗಳೂರು: ಕ್ಷಣಕ್ಷಣಕ್ಕೂ ಕುತೂಹಲ ಮೂಡಿಸುತ್ತಿರುವ ಲೋಕಸಮರದ ಫಲಿತಾಂಶ ಆರಂಭವಾಗಿ ನಾಲ್ಕು ಗಂಟೆ ಮುಕ್ತಾಯವಾಗಿದ್ದು ಬಿಸಿಲೇರುತ್ತಿದ್ದಂತೆ ಘಟಾನುಘಟಿ ನಾಯಕರಿಗೆ ಬೆವರಲು ಶುರುವಾಗಿದ್ದಾರೆ.
ಅಮೇಠಿ ಕ್ಷೇತ್ರದಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದ್ದು ಹಂತದಿಂದ ಹಂತಕ್ಕೆ ಮುನ್ನಡೆ ಬದಲಾವಣೆಯಾಗುತ್ತಿದೆ. ಪ್ರಸ್ತುತ ಏಳು ಸಾವಿರ ಮತಗಳ ಅಂತರದಿಂದ ಸ್ಮೃತಿ ಇರಾನಿ ಮುನ್ನಡೆಯಲ್ಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸುಮಾರು ಒಂದೂವರೆ ಲಕ್ಷ ಮತಗಳಿಂದ ಮುನ್ನಡೆಯಲ್ಲಿದ್ದಾರೆ.
ಎನ್ಡಿಎ ಮೈತ್ರಿಕೂಟ 335 ಕ್ಷೇತ್ರದಲ್ಲಿ, ಯುಪಿಎ 87 ಹಾಗೂ ಇತರರು 129 ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಸದ್ಯದ ಅಚ್ಚರಿಯಲ್ಲಿ ತೆಲಂಗಾಣದಲ್ಲಿ ಬಿಜೆಪಿ ಐದು ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ. ಟಿಆರ್ಎಸ್ ಹತ್ತು ಹಾಗೂ ಕಾಂಗ್ರೆಸ್ ಎರಡು ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಒಡಿಶಾ ವಿಧಾನಸಭೆ ಚುನಾವಣೆಯಲ್ಲಿ ಒಟ್ಟು 136 ಕ್ಷೇತ್ರಗಳ ಪೈಕಿ ಬಿಜೆಡಿ 94ರಲ್ಲಿ ಹಾಗೂ ಬಿಜೆಪಿ 28 ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಕರ್ನಾಟಕದಲ್ಲಿ ಮೈತ್ರಿಯ ಹೊರತಾಗಿಯೂ ಕಾಂಗ್ರೆಸ್ ಸಾಧನೆ ಅತ್ಯಂತ ಕಳಪೆಯಾಗಿ ಕಾಣುತ್ತಿದೆ. ಹಾಲಿ ಸಂಸದ ಕೆ.ಹೆಚ್.ಮುನಿಯಪ್ಪ ಕೋಲಾರ ಕ್ಷೇತ್ರದಲ್ಲಿ, ಗುಲ್ಬರ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹಿನ್ನಡೆಯಲ್ಲಿರುವುದು ಕಾಂಗ್ರೆಸ್ ಚಿಂತೆಗೀಡು ಮಾಡಿದೆ.
ಒಟ್ಟಾರೆ ಕರ್ನಾಟಕದ 28 ಕ್ಷೇತ್ರದಲ್ಲಿ 22 ಸೀಟುಗಳಲ್ಲಿ ಬಿಜೆಪಿ ಮುಂದಿದ್ದರೆ ಮೈತ್ರಿ ಅಭ್ಯರ್ಥಿಗಳು 5 ಹಾಗೂ ಓರ್ವ ಪಕ್ಷೇತರ ಅಭ್ಯರ್ಥಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಿರುವ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು 20 ಸಾವಿರ ಮತಗಳ ಹಿನ್ನಡೆ ಅನುಭವಿಸುತ್ತಿದ್ದಾರೆ.