ಬಳ್ಳಾರಿ: ಕೊರೊನಾ ಎರಡನೇ ಅಲೆ ಹೆಚ್ಚಾಗುತ್ತಿರೋದನ್ನ ತಡೆಯೋದಕ್ಕೆ ಲಾಕ್ಡೌನ್ ಒಂದೇ ಪರಿಹಾರ ಅಲ್ಲ. ಸಾರ್ವಜನಿಕರು ಸ್ವಯಂ ನಿರ್ಬಂಧ ಹಾಕಿಕೊಳ್ಳಬೇಕು. ಆಗ ಮಾತ್ರ ಸೋಂಕು ನಿಯಂತ್ರಣ ಮಾಡಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲಿನ ಜಿಂದಾಲ್ ಸಮೂಹ ಸಂಸ್ಥೆಯಿಂದ ಸಾವಿರ ಬೆಡ್ ತಾತ್ಕಾಲಿಕ ಆಸ್ಪತ್ರೆ ನಿರ್ಮಾಣ ಕಾರ್ಯವನ್ನು ಸಚಿವ ಆನಂದಸಿಂಗ್ ಅವರು ಈ ದಿನ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈಗಾಗಲೇ ಸೆಮಿ ಲಾಕ್ಡೌನ್ ಜಾರಿಯಲ್ಲಿದೆ. ಆದ್ರೂ ಈ ಕೊರೊನಾ ಅಲೆಯನ್ನ ತಡೆಯಲಾಗಲಿಲ್ಲ. ಇನ್ನೂ ಲಾಕ್ಡೌನ್ ಮಾಡಿದ್ರೆ ಅದು ಹೇಗೆ ತಡೆಯೋಕೆ ಸಾಧ್ಯವಾಗುತ್ತೆ ನೀವೇ ಹೇಳಿ ಎಂದು ಮಾಧ್ಯಮದವರನ್ನು ಪ್ರಶ್ನಿಸಿದರು.
200 ಹಾಸಿಗೆಗಳ ಸಿದ್ದತೆ ಅಂತಿಮ ಹಂತಕ್ಕೆ
ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ರೋಗಿಗಳಿಗೆ ಆಕ್ಸಿಜನ್ ಸಹಿತ ಸಾವಿರ ಬೆಡ್‍ಗಳ ತಾತ್ಕಾಲಿಕ ಆಸ್ಪತ್ರೆಯನ್ನ ತೋರಣಗಲ್ಲಿನ ಜಿಂದಾಲ್ ಕಾರ್ಖಾನೆ ಆವರಣದಲ್ಲಿ ನಿರ್ಮಾಣ ಮಾಡುತ್ತಿದ್ದು, ಸದ್ಯ 200 ಹಾಸಿಗೆಗಳ ಸಿದ್ದತೆ ಅಂತಿಮ ಹಂತಕ್ಕೆ ಬಂದಿದೆ. ಶೀಘ್ರದಲ್ಲೇ ಕೋವಿಡ್ ರೋಗಿಗಳ ಆರೈಕೆಗೆ ಅನುವು ಮಾಡಿಕೊಡಲಾಗುವುದು ಎಂದರು.
ಸಿಬ್ಬಂದಿ ನೇಮಕ
ಸದ್ಯ 200ಕ್ಕೂ ಹೆಚ್ಚು ಬೆಡ್‍ಗಳು ಸಿದ್ಧಗೊಂಡಿವೆ. ಇದಕ್ಕೆ ಬೇಕಾದ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಜಿಂದಾಲ್ ಕಾರ್ಖಾನೆಯಿಂದಲೇ ಆಕ್ಸಿಜನ್ ಪೈಪ್ಲೈನ್ ವ್ಯವಸ್ಥೆಯನ್ನ ಮಾಡಲಾಗುತ್ತಿದೆ. ಕೊರೊನಾ ನಿಯಂತ್ರಣಕ್ಕೆ ವೈದ್ಯರು ಸೇರಿದಂತೆ ಇಡೀ ಜಿಲ್ಲಾಡಳಿತ ಹರಸಾಹಸ ಪಡುತ್ತಿದೆ.
ಲಾಕ್ಡೌನ್ ಮಾಡಿದ್ರೆ ಕೊರೊನಾ ನಿಯಂತ್ರಣವಾಗಲ್ಲ
ಲಾಕ್ಡೌನ್ ಮಾಡಿದ್ರೆ ಸಮಸ್ಯೆ ಪರಿಹಾರವಾಗುತ್ತದೆಂದು ಅನಿಸುತ್ತಿಲ್ಲ. ತಜ್ಞ ವೈದ್ಯರು ಹೇಳಿದರೆ ಲಾಕ್ಡೌನ್ ಮಾಡಬಹುದು. ಕೇವಲ ಬಳ್ಳಾರಿ ಲಾಕ್ಡೌನ್ ಮಾಡಿದ್ರೆ ಕೊರೊನಾ ನಿಯಂತ್ರಣವಾಗಲ್ಲ. ಸದ್ಯ ಸೆಮಿ ಲಾಕ್ಡೌನ್ ಇದೆ. ಸಂಪೂರ್ಣ ಪ್ರಮಾಣದ ಲಾಕ್ಡೌನ್ ಮಾಡಿದ್ರು ಕಷ್ಟ, ಮಾಡದೆ ಇದ್ರೂ ಕಷ್ಟ ಎಂದರು.