ಚಿಕ್ಕೋಡಿ(ಬೆಳಗಾವಿ): ಕೊರೊನಾ ಲಸಿಕೆ ಪಡೆದುಕೊಳ್ಳಲು ಜನ ತುದಿಗಾಲಲ್ಲಿ ನಿಂತಿದ್ದು, ಗಡಿಜಿಲ್ಲೆಯಲ್ಲಿ ಹೊಸ ಆಟ ಶುರುವಾಗಿದೆ. ಕರ್ನಾಟಕದ ಜನರಿಗೆ ಕೋವಿಡ್ ಲಸಿಕೆ ನೀಡುವ ಬದಲು ಮಹಾರಾಷ್ಟ್ರದ ಜನರಿಗೆ ಚಿಕ್ಕೋಡಿಯಲ್ಲಿ ಲಸಿಕೆ ನೀಡುತ್ತಿದ್ದಾರೆ.
ಈ ಕಾರಣಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಮಹಾರಾಷ್ಟ್ರ ಜನರಿಗೆ ಕೊರೊನಾ ಲಸಿಕೆ ನೀಡುತ್ತಿರುವ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ. ನೆರೆ ರಾಜ್ಯ ಮಹಾರಾಷ್ಟ್ರದಿಂದ ನಿತ್ಯ 100ಕ್ಕೂ ಹೆಚ್ಚು ಜನರು ಕರ್ನಾಟಕಕ್ಕೆ ಬಂದು ಕೋವಿಡ್ ಲಸಿಕೆ ಪಡೆದುಕೊಂಡು ಹೋಗುತ್ತಿದ್ದಾರೆ. ಮಹಾರಾಷ್ಟ್ರ ಗಡಿ ಭಾಗದಲ್ಲಿ ಕಟ್ಟು ನಿಟ್ಟಿನ ತಪಾಸಣೆ ನಡೆಸುತ್ತಿದ್ದೇವೆ ಎಂದು ಅಧಿಕಾರಿಗಳು ಬಾಯಿ ಮಾತಿಗೆ ಹೇಳುತ್ತಿದ್ದಾರೆಯೇ ಹೊರತು ಸರಿಯಾದ ತಪಾಸಣೆ ಮಾಡುತ್ತಿಲ್ಲ. ಮಹಾರಾಷ್ಟ್ರದ ಕೊಲ್ಲಾಪುರ, ಇಚಲಕರಂಜಿ ಸೇರಿದಂತೆ ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಗಳಿಂದ ಕರ್ನಾಟಕಕ್ಕೆ ಬಂದು ಲಸಿಕೆ ಪಡೆಯುತ್ತಿದ್ದಾರೆ. ಗಡಿಯಲ್ಲಿ ಕಟ್ಟು ನಿಟ್ಟಿನ ತಪಾಸಣೆ ಇದೆ ಎನ್ನುವ ಅಧಿಕಾರಿಗಳು, ಮಹಾರಾಷ್ಟ್ರದಿಂದ ರಾಜಾರೋಷವಾಗಿ ಬಂದು ಲಸಿಕೆ ಹಾಕಿಕೊಳ್ಳುತ್ತಿರುವುದು ಹೇಗೆ ಎಂಬುದಕ್ಕೆ ಉತ್ತರ ನೀಡಬೇಕಾಗಿದೆ.
ಕರ್ನಾಟಕದಲ್ಲಿರುವ ಜನರಿಗೆ ಕೋವಿಡ್ ಲಸಿಕೆ ಅಭಾವ ಇದ್ದರೂ ಕೂಡ, ಕಳ್ಳ ಮಾರ್ಗದಿಂದ ಬರುವ ಮಹಾರಾಷ್ಟ್ರ ಜನಕ್ಕೆ ಕೋವಿಡ್ ಲಸಿಕೆ ನೀಡುತ್ತಿರುವುದಕ್ಕೆ ಸಾರ್ವಜನಿಕರು ಆಕ್ರೋಶ ಹೊರಹಾಕುವುದರ ಜೊತೆಗೆ ಗಡಿಯಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳದೇ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಸಾರ್ವಜನಿಕರು ಸರಕಾರದ ವಿರುದ್ಧ ಕಿಡಿಕಾರುವಂತಾಗಿದೆ.