ಕಲಬುರಗಿ: ಹೈಕೋರ್ಟ್ ನೊಟೀಸ್ ನೀಡಿದ ಬೆನ್ನಲ್ಲೇ ಯಾನಾಗುಂದಿ ಮಾಣಿಕೇಶ್ವರಿ ಅಮ್ಮನವರು ಮಾತನಾಡಿರುವ ವಿಡಿಯೋವನ್ನು ಶ್ರೀ ಸದ್ಗುರು ರೂಪ ರಹಿತ ಅಹಿಂಸಾ ಯೋಗೇಶ್ವರಿ ವೀರ ಧರ್ಮಜ ಮಾತಾ ಟ್ರಸ್ಟ್ ಬಿಡುಗಡೆ ಮಾಡಿದೆ.
ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಯಾನಾಗುಂದಿ ಮಾತಾ ಮಾಣಿಕೇಶ್ವರಿ ಅವರು ಸಾರ್ವಜನಿಕರಿಗೆ ದರ್ಶನ ನೀಡಿರಲಿಲ್ಲ. ಅಮ್ಮನವರ ಭೇಟಿ ಇರಲಿ, ಕನಿಷ್ಠ ಪಕ್ಷ ಅವರ ಆರೋಗ್ಯದ ಬಗ್ಗೆ ಮಾಹಿತಿಯನ್ನೂ ಕೂಡಾ ಟ್ರಸ್ಟ್ ಬಿಟ್ಟುಕೊಟ್ಟಿರಲಿಲ್ಲ. ಇದರಿಂದಾಗಿ ಅಮ್ಮನವರ ಭಕ್ತ ಸೇಡಂ ಪಟ್ಟಣದ ಶಿವಕುಮಾರ ಎಂಬುವರು ಕಲಬುರಗಿ ಹೈಕೋರ್ಟ್ ಪೀಠದಲ್ಲಿ ಮಾತಾ ಮಾಣಿಕೇಶ್ವರಿ ಅಮ್ಮನ ಆರೋಗ್ಯದ ಕುರಿತಾದ ವರದಿ ಹಾಗೂ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡುವಂತೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.
ಅಲ್ಲದೆ ಅರ್ಜಿಯಲ್ಲಿ ಅಮ್ಮನವರ ಆರೋಗ್ಯದ ಕುರಿತು ಆತಂಕ ವ್ಯಕ್ತಪಡಿಸಿ ನೈಜ ಸ್ಥಿತಿಯ ಬಗ್ಗೆ ಮಾಹಿತಿ ನೀಡಲು ಮನವಿ ಮಾಡಿದ್ದರು. ಈ ಹಿನ್ನೆಲೆ ಹೈಕೋರ್ಟ್ ಪೀಠ ಶ್ರೀ ಸದ್ಗುರು ರೂಪ ರಹಿತ ಅಹಿಂಸಾ ಯೋಗೇಶ್ವರಿ ವೀರ ಧರ್ಮಜ ಮಾತಾ ಟ್ರಸ್ಟ್ ಜೊತೆಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೂ ನೋಟೀಸ್ ನೀಡಿತ್ತು. ಈ ಅರ್ಜಿ ವಿಚಾರಣೆಯನ್ನು ಮೇ.27ಕ್ಕೆ ಮುಂದೂಡಲಾಗಿದೆ.
ಹೈಕೋರ್ಟ್ ನೋಟೀಸ್ ನೀಡಿರುವ ಬೆನ್ನಲ್ಲೇ ಟ್ರಸ್ಟ್ನವರು ಮಾಣಿಕೇಶ್ವರಿ ಹಾಸಿಗೆ ಹಿಡಿದಿರುವ ಮತ್ತು ಮಲಗಿದ್ದ ಸ್ಥಳದಿಂದಲೇ ಮಾತನಾಡಿರುವ ವಿಡಿಯೋವನ್ನು ಬಿಡುಗಡೆ ಮಾಡಿದೆ. ತಾವು ಆರೋಗ್ಯದಿಂದ ಇರುವುದಾಗಿ ಮಾತಾ ಮಾಣಿಕೇಶ್ವರಿ ವಿಡಿಯೋದಲ್ಲಿ ಹೇಳಿದ್ದಾರೆ. ಆದ್ರೆ ಅಮ್ಮನ ದೇಹ ಮಾತ್ರ ಕೃಶಗೊಂಡು (ಹಾಸಿಗೆ ಬಿಟ್ಟು ಏಳಲಾರದ ಸ್ಥಿತಿ) ಸ್ಥಿತಿಯಲ್ಲಿದೆ. ಮಾತಾ ಮಾಣಿಕೇಶ್ವರಿ ಅನಾರೋಗ್ಯ ಪೀಡಿತರಾಗಿದ್ದಾರೆ ಎಂದು ವದಂತಿ ಹಬ್ಬಿತ್ತು. ಪ್ರತಿ ಶಿವರಾತ್ರಿ ದಿನದಂದೂ ದರ್ಶನ ಕೊಡುತ್ತಿದ್ದ ಅವರು ಕಳೆದ ಶಿವರಾತ್ರಿ ಹಬ್ಬದ ವೇಳೆಯೂ ಭಕ್ತರಿಗೆ ದರ್ಶನ ಕೊಟ್ಟಿರಲಿಲ್ಲ ಎಂದು ಭಕ್ತರು ಬೇಸರ ವ್ಯಕ್ತಪಡಿಸಿದ್ದರು.