ಬೀದರ್: ರಾಜ್ಯದಲ್ಲಿ ನಡೆದ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿಸಿದ್ದು ನಾವು, ಇದಕ್ಕಿಂತ ದೊಡ್ಡ ಸಾಧನೆ ಬೇರೆ ಏನ್ಬೇಕು. ಇದು ನಾವು ಹೆಮ್ಮೆ ಪಡುವ ವಿಷಯ ಎಂದು ಬೀದರ್ ಲೋಕಸಭೆ ಕ್ಷೇತ್ರದ ಕಮಲದ ಅಭ್ಯರ್ಥಿ, ಹಾಲಿ ಸಂಸದ ಭಗವಂತ ಖೂಬಾ ಹೇಳಿದ ಮಾತು.
ಭಾಷಣದ ಭರಾಟೆಯಲ್ಲಿ ಭಗವಂತ ಖೂಬಾ ಈ ರೀತಿಯ ಹೇಳಿಕೆ ನೀಡಿ ಪೇಚಿಗೆ ಸಿಲುಕಿದ್ದಾರೆ. ಕಾರ್ಯಕರ್ತರ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಖೂಬಾ, ರಾಜ್ಯದಲ್ಲಿ ಜೆಡಿಎಸ್ ಬೆಂಬಲಿಗರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿದ್ದು ಬಿಜೆಪಿ ಸಾಧನೆ. ಸಿಎಂ, ಡಿಸಿಎಂ, ಮಂತ್ರಿಗಳು, ಕಾಂಗ್ರೆಸ್-ಜೆಡಿಎಸ್ ಮುಖಂಡರನ್ನು ಬೀದಿಗೆ ತಂದು ನಿಲ್ಲಿಸಿ ಬೊಬ್ಬೆ ಹಾಕುವಂಗೆ ಮಾಡಿಸಿದ್ದೀವಿ. ಇದಕ್ಕಿಂತ ಹೆಮ್ಮೆ ಪಡುವ ವಿಷಯ ಬೇರೆ ಏನ್ ಬೇಕು ಎಂದು ಬಿಜೆಪಿ ಕಾರ್ಯಕರ್ತರಿಗೆ ತಿಳಿಸಿದರು.
ಕಾಂಗ್ರೆಸ್ ಧೂಳಿಪಟ ಮಾಡೊವರೆಗೆ ನಿದ್ದೆ ಮಾಡೊಲ್ಲ:
ಐಟಿ ದಾಳಿ ನಂತರ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಪಪ್ಪು ಎಂಬ ಕಾರ್ಯಕರ್ತನೊಂದಿಗೆ 25-50 ಜನ ಕಾರ್ಯಕರ್ತರನ್ನ ತಗೊಂಡು ಐಟಿ ಆಫೀಸ್ ಮುಂದೆ ಧರಣಿ ಮಾಡುವಂತೆ ಹೇಳಿದ್ದಾರೆ. ಅದನ್ನೇ ಇವರು ಮಾಡುತ್ತಿದ್ದಾರೆ. ಕಾಂಗ್ರೆಸ್ ಯಾವ ಮಟ್ಟಕ್ಕೆ ಇಳಿದಿದೆ ಎಂಬುದು ಇದೀಗ ಗೊತ್ತಾಗುತ್ತಿದೆ. ಯಾವುದೇ ಚುನಾವಣೆ ಇರಲಿ ಕಾಂಗ್ರೆಸ್ ನ್ನು ಧೂಳಿಪಟ ಮಾಡುವವರೆಗೆ ನಾನು ನಿದ್ದೆ ಮಾಡುವುದಿಲ್ಲ ಎಂದರು.