ಕನ್ಯಾಕುಮಾರಿ (ತಮಿಳುನಾಡು): ಕನ್ಯಾಕುಮಾರಿಯ ಕುರುಂಬನ ಗ್ರಾಮದಲ್ಲಿ ಭಾರೀ ಮಳೆಯಿಂದ ಪ್ರವಾಹ ಉಂಟಾಗಿದ್ದು, ಅಪಾರ ಪ್ರಮಾಣ ಹಾನಿ ಸಂಭವಿಸಿದೆ.
ಭಾರಿ ಮಳೆಯಿಂದಾಗಿ ಪೆರಿಯಾಕುಲಂ, ಕಕ್ಕೈಕುಲಂ, ಮತ್ತು ತಮರೈಕ್ಕುಲಂ ಎಂಬ ಮೂರು ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿ ಫೀಲ್ಡ್ ಕಾಲೋನಿ ಪ್ರದೇಶದ 150 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ತೀವ್ರ ಹಾನಿಯಾಗಿದೆ. ಅದೃಷ್ಟವಶಾತ್, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಸದ್ಯ ಸಂತ್ರಸ್ತರಿಗೆ ಸೇಂಟ್ ಇಂಜಾಸಿಯಾರ್ ಶಾಲೆ ಮತ್ತು ಪ್ರದೇಶದ ಸುತ್ತಮುತ್ತಲಿನ ಸಭಾಂಗಣಗಳಲ್ಲಿ ಆಶ್ರಯ ಕಲ್ಪಿಸಲಾಗಿದೆ. ಕುರುಂಬನ ಸೇತುವೆಯ ದಕ್ಷಿಣ ಭಾಗದಲ್ಲಿ 150 ಮನೆಗಳು ಸಂಪೂರ್ಣವಾಗಿ ಮುಳುಗಿದ್ದು, ಹಾನಿಯನ್ನು ಎದುರಿಸುತ್ತಿವೆ.
ಪ್ರವಾಹದ ಪರಿಸ್ಥಿತಿ ಎದುರಿಸಲು ರಿಥಾಪುರಂ ಮುನ್ಸಿಪಲ್ ಎಕ್ಸಿಕ್ಯೂಟಿವ್ ಆಫೀಸರ್ ಬಾಲಸುಬ್ರಮಣಿಯನ್ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜನರು ಆರೋಪಿಸಿದ್ದಾರೆ.
ಶಾಲೆಗಳು, ಸಭಾಂಗಣಗಳು ಮತ್ತು ಸಂಬಂಧಿಕರ ಮನೆಗಳಲ್ಲಿ ಉಳಿದುಕೊಂಡ ಸಂತ್ರಸ್ತರು ಅಗತ್ಯ ವಸ್ತುಗಳನ್ನು ಪೂರೈಸುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.