ಕೊಪ್ಪಳ : ಕೊರೊನಾ ಸೋಂಕಿನ ಎರಡನೇ ಅಲೆ ವ್ಯಾಪಕವಾಗಿ ಹರಡಿದೆ. ಸಾಮಾನ್ಯ ಜನರ ಜೀವನ ದುಸ್ತರವಾಗಿಸಿದೆ.
ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಜಾರಿ ಮಾಡಲಾದ ಕೊರೊನಾ ಕರ್ಫ್ಯೂ, ಲಾಕ್‌ಡೌನ್‌ನಿಂದಾಗಿ ಸಾಮಾನ್ಯ ವರ್ಗದ, ಬಡ ಕುಟುಂಬಗಳ ಪರಸ್ಥಿತಿ ತುಂಬಾ ಕಷ್ಟವಾಗುತ್ತಿದೆ. ಅದರಲ್ಲೂ ಕುಲಕಸುಬನ್ನು ನಂಬಿಕೊಂಡಿರುವ ಕುಶಲಕರ್ಮಿ ಕಮ್ಮಾರರು ತತ್ತರಿಸುತ್ತಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ಅವರ ಬದುಕು, ಬವಣೆ ಕುರಿತ ಒಂದು ವಿಶೇಷ ವರದಿ ಇಲ್ಲಿದೆ ನೋಡಿ...
ಕಳೆದ ವರ್ಷದಿಂದ ಕೊರೊನಾ ಸೋಂಕಿನಿಂದಾಗಿ ಎಲ್ಲ ವರ್ಗದ ಜನರು ಸಂಕಷ್ಟ ಅನುಭವಿಸುವಂತಾಗಿದೆ. ನಿತ್ಯವೂ ದುಡಿದು ತಿನ್ನುವ ಜನರ ಬದುಕಂತೂ ಅಯೋಮಯವಾಗುತ್ತಿದೆ.
ಸಾಮಾನ್ಯ ವರ್ಗದ ಜನರ ಸಾಲಿನಲ್ಲಿ ಬರುವ ಕುಶಲಕರ್ಮಿಗಳ ಬದುಕು ಸಹ ಇದಕ್ಕೆ ಹೊರತಾಗಿಲ್ಲ. ವಿಶ್ವಕರ್ಮ ಸಮುದಾಯದ ಪಂಚ ಕಸುಬು ಮಾಡುವವರಲ್ಲಿ ಕಮ್ಮಾರರು ಇದ್ದಾರೆ.
ವಿಶ್ವಕರ್ಮ ಸಮುದಾಯ ಹೊರತುಪಡಿಸಿ ಬೇರೆ ಸಮುದಾಯದ ಅಲ್ಲೊಬ್ಬ ಇಲ್ಲೊಬ್ಬರಂತೆ ತಮ್ಮ ಉಪಜೀವನಕ್ಕೆ ಕಮ್ಮಾರಿಕೆಯನ್ನು ವೃತ್ತಿಯನ್ನಾಗಿಸಿಕೊಂಡಿದ್ದಾರೆ. ಬಹುಪಾಲು ಕಮ್ಮಾರಿಕೆಯಲ್ಲಿ ತೊಡಗಿಕೊಂಡಿರುವವರು ವಿಶ್ವಕರ್ಮ ಸಮುದಾಯದ ಜನರು. ಕೊಪ್ಪಳ ಜಿಲ್ಲೆಯಲ್ಲಿಯೂ ಸಹ ನೂರಾರು ಕಮ್ಮಾರರು ಕಮ್ಮಾರಿಕೆಯ ಮೂಲಕವೇ ಜೀವನ ನಡೆಸುತ್ತಿದ್ದಾರೆ.
ರೈತರೇ ಇವರ ಬೆನ್ನೆಲುಬು:
ಬಹಳ ಮುಖ್ಯವಾಗಿ ರೈತಾಪಿ ವರ್ಗಕ್ಕೆ ಬೇಕಾಗುವ ಕುಡಗೋಲು, ಕುರ್ಚಿಗೆ, ತಾಳು, ಕುಡ, ಮುಂಜಣ, ಗುದ್ದಲಿ, ಸಲಿಕೆ, ಹಾರೆ, ಮೇವು ಕತ್ತರಿಸುವ ಸಾಧನ, ಅಲಗು ಸೇರಿದಂತೆ ಇನ್ನೂ ಅನೇಕ ಕಬ್ಬಿಣದ ವಸ್ತುಗಳನ್ನು ತಯಾರಿಸಿ ಮಾರುತ್ತಾರೆ. ಆದರೆ, ಕೊರೊನಾ ಸೋಂಕು ಹರುವಿಕೆಯು ಈಗ ಕಮ್ಮಾರರ ಬದುಕಿನ ಮೇಲೆ ಕರಿನೆರಳು ಬೀರಿದೆ.
ಕಳೆದ ಒಂದು ವರ್ಷದಿಂದ ಬಾಧಿಸುತ್ತಿರುವ ಕೊರೊನಾ ಸೋಂಕು ಅನೇಕ ಚಟುವಟಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಜಾರಿ ಮಾಡಲಾದ ಕೊರೊನಾ ಕರ್ಫ್ಯೂ, ಲಾಕ್‌ಡೌನ್‌ನಿಂದ ಕೃಷಿ ಚಟುವಟಿಕೆಗಳು ಸಹ ಒಂದಿಷ್ಟು ಕುಂಠಿತಗೊಂಡಿವೆ. ಇದರಿಂದಾಗಿ ಕಮ್ಮಾರರು ತಯಾರಿಸಿದ ವಸ್ತುಗಳ ವ್ಯಾಪಾರವಿಲ್ಲದೆ ಅವರ ಬದುಕು ಸಂಕಷ್ಟಕ್ಕೆ ಸಿಲುಕಿದೆ.
ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಲಾಕ್ ಡೌನ್ ಇರುವುದರಿಂದ ರೈತರು ಬರುತ್ತಿಲ್ಲ, ಸಂತೆಗಳು ನಡೆಯುತ್ತಿಲ್ಲ. ನಾವು ಮಾಡಿರುವ ರೈತರ ಬಳಕೆಯ ಅನೇಕ ವಸ್ತುಗಳನ್ನು ಸಂತೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದೆವು.
ಅದರಿಂದ ಬಂದ ಆದಾಯದಿಂದ ಜೀವನ ನಡೆಸುತ್ತಿದ್ದೆವು. ಆದರೆ, ಕೊರೊನಾ ಸೋಂಕು ಹರಡುವಿಕೆ ಹಾಗೂ ಲಾಕ್‌ಡೌನ್‌ನಿಂದಾಗಿ ಸಂತೆಗಳೂ ಇಲ್ಲ, ರೈತರು ಬರುವುದು ಕಡಿಮೆಯಾಗಿದೆ. ಇದರಿಂದಾಗಿ ನಮ್ಮ ಬದುಕು ದುಸ್ತರವಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿ ಸುಮಾರು 600 ಕ್ಕೂ ಹೆಚ್ಚು ಗ್ರಾಮಗಳಿದ್ದು ಪ್ರತಿ ಊರಲ್ಲಿಯೂ ಎನಿಲ್ಲವೆಂದರೂ ಒಂದು ಕಮ್ಮಾರಿಕೆಯ ಕುಲುಮೆ ಇದ್ದೆ ಇರುತ್ತದೆ. ಹೀಗಾಗಿ ಜಿಲ್ಲೆಯಲ್ಲಿ ಸಾವಿರಕ್ಕೂ ಹೆಚ್ಚು ಕಮ್ಮಾರರು ಕಮ್ಮಾರಿಕೆಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಸಂಕಷ್ಟದಲ್ಲಿರುವ ಕಮ್ಮಾರರ ನೆರವಿಗೆ ಸರ್ಕಾರ ಬರಬೇಕು ಎಂದು ಸಮುದಾಯದ ಮುಖಂಡರು ಆಗ್ರಹಿಸಿದ್ದಾರೆ.