ಕಲಬುರಗಿ: ತಂದೆ-ತಾಯಿಯ ವಿವಾಹ ವಾರ್ಷಿಕೋತ್ಸವದ ದಿನವನ್ನು ಸ್ಮರಣೀಯಗೊಳಿಸಬೇಕು ಎಂದು ಮುಂದಾದ ಮಗಳು, ತಾನು ಕೂಡಿಟ್ಟ ಹಣದಲ್ಲಿ ದಿನಸಿ ಕಿಟ್ ಖರೀದಿ ಮಾಡಿ ಕೊರೊನಾದಿಂದ ಸಂಕಷ್ಟದಲ್ಲಿರುವ ಬಡ ಕೂಲಿ ಕಾರ್ಮಿಕರಿಗೆ ವಿತರಿಸಿದ್ದಾಳೆ.
ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟಕ ವಿಜಯಕುಮಾರ್ ತೆಗಲತಿಪ್ಪಿಯವರ ಪುತ್ರಿ ಸೃಷ್ಟಿ ಪಾಟೀಲ್ ತನ್ನ ಪೋಷಕರ 13ನೇ ವಿವಾಹ ವಾರ್ಷಿಕೋತ್ಸವದಂದು ಬಡ ಕೂಲಿ ಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸಿದ್ದಾಳೆ. ಕಲಬುರಗಿ ನಗರದ ಹೈಕೋರ್ಟ್ ಬಳಿಯ ಬಡ ಕೂಲಿ ಕಾರ್ಮಿಕರಿಗೆ ಮತ್ತು ಕಲಾವಿದರಿಗೆ ದಿನಸಿ ಕಿಟ್‌ಗಳನ್ನು ವಿತರಣೆ ಮಾಡಲಾಗಿದೆ.
ತಾನು ಕೂಡಿಟ್ಟ ಹಣದಲ್ಲಿ ಬಡ ಕೂಲಿ ಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸಿ ಪೋಷಕರ ವಿವಾಹ ವಾರ್ಷಿಕೋತ್ಸವ ಆಚರಿಸಿದ ಸೃಷ್ಟಿ ಪಾಟೀಲ್, ಚಿಕ್ಕವಯಸ್ಸಿನಲ್ಲಿ ಹೃದಯ ವೈಶಾಲ್ಯತೆ ಮೆರೆದಿದ್ದಾಳೆ.
ಇಡೀ ದೇಶ ಕೊರೊನಾದಿಂದ ಸಮಸ್ಯೆ ಎದುರಿಸುತ್ತಿದೆ. ಲಾಕ್ಡೌನ್ನಿಂದಾಗಿ ಬಡ ಹಾಗೂ ಕೂಲಿ ಕಾರ್ಮಿಕರು ಹಸಿವಿನಿಂದ ಬಳಲುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಟಿವಿ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಇದರಿಂದಾಗಿ ನನ್ನ ತಂದೆ-ತಾಯಿಯ ವಿವಾಹ ವಾರ್ಷಿಕೋತ್ಸವದ ಹಿನ್ನೆಲೆ ಈ ವರ್ಷ ದುಂದುವೆಚ್ಚ ಮಾಡದೆ ಸಂಕಷ್ಟದಲ್ಲಿರುವ ಬಡರಿಗೆ ಸಹಾಯ ಮಾಡಲು ಮುಂದಾಗಿದ್ದೇನೆ ಎಂದು ಬಾಲಕಿ ಸೃಷ್ಟಿ ಪಾಟೀಲ್ ತಿಳಿಸಿದ್ದಾಳೆ.