ತುಮಕೂರು: ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿ ವಾಪಸ್ ಬರುತ್ತಿದ್ದ ವೇಳೆ ಮಾಜಿ ಶಾಸಕ ಸುರೇಶ್‌ಗೌಡ ಅವರನ್ನು ಜೆಡಿಎಸ್ ಕಾರ್ಯಕರ್ತರು ತೀವ್ರ ತರಾಟೆಗೆ ಗೆದುಕೊಂಡಿದ್ದು, ಶಾಸಕ ಗೌರಿಶಂಕರ್ ಏನು ತಪ್ಪು ಮಾಡಿದ್ದಾರೆ ಎಂದು ಕಿಡಿಕಾರಿದರು.
ಇದೇ ವೇಳೆ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆಗೆ ಮುಂದಾದರೂ ಯಾವ ಪೊಲೀಸರು ಭದ್ರತೆ ನೀಡಿಲ್ಲ ಎಂದು ಮಾಜಿ ಶಾಸಕ ಅಸಮಾಧಾನದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ತೆರಳಿ ಸೂಕ್ತಕ್ರಮಕ್ಕೆ ಮುಂದಾಗುವಂತೆ ಆಗ್ರಹಿಸಿದರು.
ಇಲ್ಲಿನ ಖಾಸಗಿ ಹೋಟೆಲ್ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಮನೆ ಕಳ್ಳತನ, ಸರ ಕಳ್ಳತನ ಇನ್ನಿತರೆ ಪ್ರಕರಣಗಳಿಗೆ ಸೇರಿದಂತೆ ಪೊಲೀಸರು ಯಾವ ಸೂಕ್ತ ಕ್ರಮವನ್ನೂ ತೆಗೆದುಕೊಳ್ಳುತ್ತಿಲ್ಲ. ಪ್ರಕರಣ ನಡೆದು ವರ್ಷಗಳೇ ಕಳೆದರೂ ಎಫ್ಐಆರ್ ಕೂಡಾ ದಾಖಲಿಸಿಕೊಂಡಿಲ್ಲ ಎಂದು ಮಾಜಿ ಶಾಸಕ ಸುರೇಶ್‌ಗೌಡ ಪೊಲೀಸರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಜನರ ಸಮಸ್ಯೆಗಳಿಗೆ ಪರಿಹಾರ ಕೇಳುವುದೇ ತಪ್ಪಾ? ಅನ್ಯಾಯದ ವಿರುದ್ಧ ಮಾತನಾಡುವ ಸ್ವಾತಂತ್ರ್ಯವಿಲ್ಲವೆ. ಜಿಲ್ಲೆಯಲ್ಲಿ ಪೊಲೀಸ್ ಆಡಳಿತ ವೈಖರಿ ಸಂಪೂರ್ಣ ವಿಫಲವಾಗಿದೆ. ಎಲ್ಲವೂ ಲಂಚದ ಮೇಲೆ ನಡೆಯುತ್ತಿದೆ ಎಂದು ಪರೋಕ್ಷವಾಗಿ ಶಾಸಕ ಗೌರಿಶಂಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ದೂರು ನೀಡಲು ಸುರೇಶ್‌ಗೌಡ ಹೊರಟಿದ್ದಾಗ ಜೆಡಿಎಸ್ ಕಾರ್ಯಕರ್ತರು ಪ್ರಶ್ನೆಯ ಸುರುಮಳೆ ಗೈಯುತ್ತಲೆ ಅವರ ಜತೆ ನಡೆದರು. ಕಚೇರಿ ಹತ್ತಿರವಾಗುತ್ತಿದ್ದಂತೆ ಕಾರ್ಯಕರ್ತರು ವಾಪಸ್ ತೆರಳಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿ ಕೃಷ್ಣ ಅವರನ್ನು ಭೇಟಿ ಮಾಡಿದರು. ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಸ್ಪಿ ಭರವಸೆ ನೀಡಿದರು.