ಚೆನ್ನೈ: ಕಳೆದ ಬಾರಿಯ ಐಪಿಎಲ್ನಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ್ದ ಎಂಎಸ್ ಧೋನಿ ಈ ಬಾರಿಯೂ ನಾಲ್ಕನೇ ಕ್ರಮಾಂಕದಲ್ಲಿಯೇ ಕಣಕ್ಕಿಳಿಯಲಿದ್ದಾರೆ ಎಂದು ಕೋಚ್ ಸ್ಟೀಫನ್ ಫ್ಲೆಮಿಂಗ್ ತಿಳಿಸಿದ್ದಾರೆ.
11 ಆವೃತ್ತಿಯ ಐಪಿಎಲ್ನಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡುತ್ತಿದ್ದ ಕೇದಾರ್ ಜಾಧವ್ ಮೊದಲ ಪಂದ್ಯದಲ್ಲೇ ಸ್ನಾಯು ಸೆಳೆತಕ್ಕೆ ಒಳಗಾಗಿ ಐಪಿಎಲ್ನಿಂದ ಹೊರಬಿದ್ದಿದ್ದರು. ಆದರೆ ಆವೃತ್ತಿ ಪೂರ ಬ್ಯಾಟಿಂಗ್ನಲ್ಲಿ ವಿಜೃಂಭಿಸಿದ್ದ ಧೋನಿ 455 ರನ್ಗಳಿಸಿದ್ದರು.
ಈ ಬಾರಿ ಕೇದಾರ್ ಜಾಧವ್ ತಂಡಕ್ಕೆ ಸೇರ್ಪಡೆಯಾಗಿರುವುದರಿಂದ ಮತ್ತೆ ಧೋನಿ ಕೆಳಕ್ರಮಾಂಕದಲ್ಲಿ ಆಡಬಹುದೆಂದು ಲೆಕ್ಕಚಾರ ಮಾಡಲಾಗಿತ್ತು, ಆದರೆ ಕೋಚ್ ಧೋನಿ 4ನೇ ಕ್ರಮಾಂಕದಲ್ಲಿಯೇ ಆಡಲಿದ್ದಾರೆ. ಕೆಳಕ್ರಮಾಂಕದಲ್ಲಿ ಕೇದಾರ್ 5,6 ಅಥವಾ 7ನೇ ಕ್ರಮಾಂಕದಲ್ಲಿ ಎಲ್ಲಿ ಬೇಕಾದರೂ ಆಡಲು ಸಮರ್ಥರಿದ್ದಾರೆ ಎಂದು ತಿಳಿಸಿದ್ದಾರೆ.
ಮುಂಬರುವ ವಿಶ್ವಕಪ್ಗೆ ನಾಲ್ಕನೇ ಕ್ರಮಾಂಕದಲ್ಲಿ ಯಾರು ಆಡಲಿದ್ದಾರೆ ಎಂಬ ಚರ್ಚೆ ಶುರುವಾಗಿದ್ದು ಧೋನಿ ಏನಾದರೂ ಐಪಿಎಲ್ನಲ್ಲಿ ಮಿಂಚಿದ್ದೇ ಆದಲ್ಲಿ 4 ನೇ ಕ್ರಮಾಂಕಕ್ಕೆ ಧೋನಿಯೂ ಕೂಡ ಸ್ಪರ್ಧಿಯಾಗಲಿದ್ದಾರೆ.
ಮುಂಬರುವ ಏಕದಿನ ವಿಶ್ವಕಪ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ನಾಲ್ಕನೇ ಕ್ರಮಾಂಕದಲ್ಲಿ ಆಡುವರೇ ಎಂಬುದು ಬಹಳಷ್ಟು ಚರ್ಚೆಗೀಡಾಗಿದೆ. ಏನೇ ಇರಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಂತೂ ಮಹಿ ನಾಲ್ಕನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಇದನ್ನು ಚೆನ್ನೈ ಸೂಪರ್ ಕಿಂಗ್ಸ್ ಕೋಚ್ ಸ್ಟೀಫನ್ ಫ್ಲೆಮಿಂಗ್ ಸ್ಪಷ್ಟಪಡಿಸಿದ್ದಾರೆ.
ಕಳೆದ 10 ತಿಂಗಳಲ್ಲಿ ಧೋನಿ ಅದ್ಭುತ ಫಾರ್ಮ್ ಕಾಪಾಡಿಕೊಂಡಿದ್ದಾರೆ. ಕೇದಾರ್ ಜಾಧವ್ ಸಹ ಉತ್ತಮ ನಿರ್ವಹಣೆ ಮಾಡುತ್ತಿದ್ದಾರೆ. ಹಾಗಾಗಿ ನಮ್ಮ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ತುಂಬಾನೇ ಸಂತಸವಿದೆ ಎಂದರು.
ಕಳೆದ ಬಾರಿ ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹೊರಗುಳಿದಿದ್ದ ಮಿಚೆಲ್ ಸ್ಯಾಂಟ್ನರ್ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ. ಆದರೆ ದ.ಆಫ್ರಿಕಾದ ಉದಯೋನ್ಮುಖ ಬೌಲರ್ ಲುಂಗಿ ಎನ್ಗಿಡಿ ಗಾಯದ ಸಮಸ್ಯೆ ಎದುರಿಸುತ್ತಿದ್ದು, ಟೂರ್ನಿಯಿಂದ ಹೊರಬಿದ್ದಿದ್ದಾರೆ.