ಹೈದರಾಬಾದ್: ಸಮಾಜದ ಅವಿಭಾಜ್ಯ ಅಂಗವಾಗಿ ಇಂದು ಬೃಹದಾಕಾರವಾಗಿ ಬೆಳೆದಿರುವ ಕ್ರೀಡಾ ಕ್ಷೇತ್ರಕ್ಕೆ ಈ ದಿನವನ್ನು ಅರ್ಪಿಸಲಾಗಿದ್ದು, ಪ್ರಪಂಚದಾದ್ಯಂತ ಏಪ್ರಿಲ್ 6ಅನ್ನು ಅಂತಾರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತಿದೆ.
ಪ್ರಪಂಚದ ಎಲ್ಲಾ ದೇಶಗಳನ್ನು ಒಂದೆಡೆ ಸೇರಿಸಿ ಸಂಸ್ಕೃತಿ ವಿನಿಮಯ ಹಾಗೂ ಶಾಂತಿ ಕಾಪಾಡುವ ಉದ್ದೇಶದಿಂದ 1896ರ ಏಪ್ರಿಲ್ 6ರಂದು ಆರಂಭವಾದ ಮೊದಲ ಒಲಿಂಪಿಕ್ ಕ್ರೀಡಾಕೂಟದ ದಿನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತಿದೆ.
ಫ್ರೆಂಚ್ ಇತಿಹಾಸ ತಜ್ಞ ಪಿಯೆರ್ ಡಿ ಕೊಬೆರ್ಟಿನ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಲಿಂಪಿಕ್ ಕಮಿಟಿಯನ್ನು ಸ್ಥಾಪಿಸಿ 1896 ಏಪ್ರಿಲ್ 6ರಂದು ಚೊಚ್ಚಲ ಒಲಿಂಪಿಕ್ಗೆ ಚಾಲನೆ ನೀಡಿದರು. ಕ್ರೀಡಾ ಕ್ಷೇತ್ರದಲ್ಲಿ ಹೊಸ ಯುಗ ಆರಂಭವಾದ ಈ ದಿನವನ್ನು ಯನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಅಂತಾರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲು ಘೋಷಣೆ ಮಾಡಿದೆ.
ಜಗತ್ತಿನಲ್ಲಿ ಶಾಂತಿ ನೆಲೆಸುವವಂತೆ ಕ್ರೀಡೆಯನ್ನು ಒಂದು ಅಸ್ತ್ರವನ್ನಾಗಿ ಉಪಯೋಗಿಸಿಕೊಂಡು ಸಮುದಾಯಗಳ ಅಭಿವೃದ್ಧಿಗೊಳಿಸುವ ಜೊತೆಗೆ ಪ್ರಪಂಚವನ್ನು ಶಾಂತಿಯುತ ನೆಲೆಯಾಗಿಸುವ ಉದ್ದೇಶದಿಂದ ಅಮೆರಿಕಾದ ದೈಹಿಕ ಶಿಕ್ಷಣ ಹಾಗೂ ಕ್ರೀಡಾ ವಿಭಾಗ ಈ ದಿನವನ್ನು ಅಂತಾರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಿಲು ನಿರ್ಧರಿಸಿತು.
ಕ್ರೀಡೆ ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗಿಲ್ಲ. ಅದು ಸಮಾಜದಲ್ಲಿ ಲಿಂಗ ಸಮಾನತೆ, ಯುವ ಸಬಲೀಕರಣ, ಸಾಮಾಜಿಕ ಏಕೀಕರಣವನ್ನು ಸಾಧಿಸಲು ನೆರವಾಗಿದೆ. ಹಲವು ದೇಶಗಳ ಸಂಸ್ಕೃತಿ ವಿನಿಮಯ, ಶೈಕ್ಷಣಿಕ, ಆರೋಗ್ಯ, ಆರ್ಥಿಕತೆ ಹಾಗೂ ಸಮಾಜದ ಅಭಿವೃದ್ಧಿಯಲ್ಲೂ ಪ್ರಮುಖ ಪಾತ್ರ ವಹಿಸುತ್ತಿದೆ.
ಇದೆಲ್ಲದರ ಜೊತೆಗೆ ಕ್ರೀಡೆ ಇಂದು ಮನರಂಜನೆಯಲ್ಲಿ ಮೊದಲ ಸ್ಥಾನ ಗಿಟ್ಟಿಸಿಕೊಂಡಿದೆ. ಹೊರ ಹಾಗೂ ಒಳಾಂಗಣದಲ್ಲಿ ಸಾವಿರಾರು ಆಟಗಳು ಇಂದು ಪ್ರತಿಯೊಬ್ಬ ಮನುಷ್ಯನಲ್ಲೂ ಪ್ರಭಾವ ಬೀರಿರುರುವುದಕ್ಕೆ ಕ್ರೀಡೆಗೆ ಒಂದು ದಿನ ಮೀಸಲಿಟ್ಟು ಅದರ ಜನುಮದಿನವನ್ನು ಆಚರಿಸುತ್ತಿರುವುದು ಉತ್ತಮವಾದ ಕಾರ್ಯಕ್ರಮವಾಗಿದೆ ಎಂದರೆ ತಪ್ಪಾಗಲಾರದು.