ಕುಷ್ಟಗಿ (ಕೊಪ್ಪಳ): ಹವಾಮಾನ ವೈಪರಿತ್ಯ ಹಿನ್ನೆಲೆಯಲ್ಲಿ ಹತ್ತಿ ಬೆಳೆಗೆ ರಸ ಹೀರುವ ಕೀಟಗಳ ಬಾಧೆ ವಕ್ಕರಿಸಿದ್ದು, ಪರಿಣಾಮ ಬೆಳೆಗಳನ್ನು ಉಳಿಸಿಕೊಳ್ಳುವುದು ರೈತರಿಗೆ ಸವಾಲಾಗಿದೆ.
ಪ್ರತಿ ವರ್ಷ ತಾಲೂಕಿನಲ್ಲಿ 950 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆಯಾಗುತ್ತದೆ. ಜುಲೈ 15ರವರೆಗೂ ಹತ್ತಿ ನಾಟಿ ಮಾಡಬಹುದಾಗಿದೆ. ತಾಲೂಕಿನ ಹಂಚಿನಾಳದ ಅಮರೇಗೌಡ ಪಾಟೀಲ ಎಂಬುವರು ಬೆಳೆದ ಹತ್ತಿಗೆ ಕೀಟಗಳ ಬಾಧೆ ಕಂಡು ಬಂದ ಹಿನ್ನೆಲೆಯಲ್ಲಿ ಕೃಷಿ ಅಧಿಕಾರಿಗಳಾದ ಬಾಲಪ್ಪ ಜಲಗೇರಿ, ರಾಘವೇಂದ್ರ ಕೊಂಡಗುರಿ ಭೇಟಿ ನೀಡಿ ಪರಿಶೀಲಿಸಿದರು.
ಬಳಿಕ ಈಟಿವಿ ಭಾರತ ಪ್ರತಿನಿಧಿಯೊಂದಿಗೆ ಮಾತನಾಡಿದ ಕೃಷಿ ಅಧಿಕಾರಿ ರಾಘವೇಂದ್ರ ಕೊಂಡಗುರಿ, ಹವಾಮಾನದಲ್ಲಿ ಉಷ್ಣಾಂಶದ ಏರಿಳಿತವಾದರೆ ಹತ್ತಿಗೆ ಕೀಟ ಬಾಧೆಯ ತೀವ್ರತೆ ಕಂಡು ಬರುತ್ತದೆ. ನಿರ್ವಹಣೆಗೆ ಕೀಟನಾಶಕಗಳಾದ ಅಸಿಟಾಮಾಪ್ರಿಡ್ 20% SP 0.3 ಗ್ರಾಂ ಅಥವಾ ಇಮಿಡಾಕ್ಲೋಪ್ರಡ್ 17.8% SL 0.3 ಎಂ.ಎಲ್. ಅಥವಾ ಥಯೋಮಿಥಾಕ್ಸಮ್ 25% WG 0.3 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಿ ನಿಯಂತ್ರಿಸಲು ಸಲಹೆ ನೀಡಿದರು.