ಹೊಸಪೇಟೆ (ವಿಜಯನಗರ): ವಿಶ್ವವಿಖ್ಯಾತ ಹಂಪಿ ಪ್ರವಾಸಿತಾಣದ ಮಾರ್ಗದರ್ಶಿ(ಗೈಡ್)ಗಳು ಕೊರೊನಾ ಲಾಕ್ಡೌನ್ನಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ, 100 ಮಂದಿ ಗೈಡ್ಗಳಿಗೆ ಧನಸಹಾಯ ಮಾಡಿದ್ದು, ತಲಾ 10 ಸಾವಿರ ರೂ. ನೆರವು ನೀಡಿದ್ದಾರೆ.
ಕಳೆದ ವರ್ಷವು ಸುಧಾಮೂರ್ತಿ ಅವರು ಗೈಡ್ಗಳಿಗೆ ನೆರವು ನೀಡಿದ್ದರು. ಈ ವರ್ಷವು ಧನ ಸಹಾಯ ಮಾಡಲು ಮುಂದಾಗಿದ್ದಾರೆ. ಕಳೆದ ವರ್ಷದಲ್ಲಿ ಮಾರ್ಚ್ ತಿಂಗಳಿನ ಅಂತ್ಯದಲ್ಲಿ ಲಾಕ್ಡೌನ್ ಘೋಷಿಸಲಾಗಿತ್ತು. ಸತತ ಏಳು ತಿಂಗಳ ಕಾಲ ಪ್ರವಾಸಿಗರು ಹಂಪಿಯತ್ತ ಮುಖ ಮಾಡಿರಲಿಲ್ಲ. ಡಿಸೆಂಬರ್ ಹಾಗೂ ಜನವರಿ ವೇಳೆ ಪ್ರವಾಸಿಗರು ಹಂಪಿಯ ಕಡೆ ಹಜ್ಜೆ ಹಾಕಿದ್ದರು. ಆದರೆ, ಈಗ ಮತ್ತೆ ಕೊರೊನಾದಿಂದ ಲಾಕ್ಡೌನ್ ಘೋಷಣೆ ಮಾಡಲಾಗಿದ್ದು, ಗೈಡ್ಗಳಿಗೆ ಬರಸಿಡಿಲು ಬಡದಂತಾಗಿದೆ.
ಸಂಕಷ್ಟದ ಕಾಲದಲ್ಲಿ ಸುಧಾಮೂರ್ತಿ ಅವರು ಮಾಡಿರುವ ಧನ ಸಹಾಯ ಮರೆಯುವಂತಿಲ್ಲ ಎಂದು ಗೈಡ್ಗಳು ಸಂತಸ ವ್ಯಕ್ತಪಡಿಸಿದರು.
ಹಂಪಿಯಲ್ಲಿ ಪ್ರವಾಸಿಗರಿಗೆ ಅರ್ಥವಾಗುವ ರೀತಿಯಲ್ಲಿ ಸುಲಿತವಾಗಿ ಇತಿಹಾಸ ತಿಳಿಸುವಲ್ಲಿ ಗೈಡ್ಗಳ ಪಾತ್ರ ಮಹತ್ವದಾಗಿದೆ. ಆದರೆ, ಸರ್ಕಾರ ಇಂತಹ ಸಂಕಷ್ಟ ಸಮಯದಲ್ಲಿ ಮಾರ್ಗದರ್ಶಿಗಳನ್ನು ಪರಿಗಣಿಸುತ್ತಿಲ್ಲ. ಹೀಗಾಗಿ ಕೂಡಲೇ ಸರ್ಕಾರ ಗೈಡ್ಗಳ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದ್ದಾರೆ.
ಹಿರಿಯ ಮಾರ್ಗದರ್ಶಿ ಹನುಮನಸಿಂಗ್ ಮಾತನಾಡಿ, ಸುಧಾಮೂರ್ತಿ ಅವರ ಧನಸಹಾಯ ಬಳಷ್ಟು ಸಹಕಾರಿಯಾಗಿದೆ. ಅಲ್ಲದೇ, ಬದುಕು ಸಾಗಿಸಲು ಸಹಾಯವಾಗಿದೆ ಎಂದರು.
ಗೈಡ್ ಗೋಪಾಲ್ ಮಾತನಾಡಿ, ಸುಧಾಮೂರ್ತಿ ಅವರ ಸಹಾಯ ಎಂದು ಮರೆಯುವಂತಿಲ್ಲ. ಲಾಕ್ಡೌನ್ ಸಂದರ್ಭದಲ್ಲಿ ಜೀವನ ನಡೆಸುವುದು ಕಷ್ಟಕರವಾಗಿದೆ. ಇತಂಹ ಸಂದಿಗ್ಧ ಪರಿಸ್ಥಿತಿಯಲ್ಲಿ ಧನ ಸಹಾಯ ಮಾರ್ಗದರ್ಶಿಗಳ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.