ಹುಬ್ಬಳ್ಳಿ: ರಾಜ್ಯ ಹಲವು ಜಿಲ್ಲೆಗಳಲ್ಲಿ ಕೆ.ಐ.ಡಿ.ಬಿ ಹಾಗೂ ಕೆ.ಎಸ್.ಎಸ್.ಐ.ಡಿ.ಸಿ ಸೇರಿದಂತೆ ಹಲವು ಕೈಗಾರಿಕಾ ಪ್ರದೇಶಗಳ ವ್ಯಾಜ್ಯಗಳು ನ್ಯಾಯಾಲಯಗಳಲ್ಲಿವೆ. ಇವುಗಳಲ್ಲಿ ಬಹುಪಾಲು ವ್ಯಾಜ್ಯಗಳನ್ನು ಸುಲಭವಾಗಿ ಇತ್ಯರ್ಥಗೊಳಿಸಬಹುದು. ಆದ್ದರಿಂದ ಪ್ರತಿ ಜಿಲ್ಲಾ ಹಂತದಲ್ಲಿ ಕೈಗಾರಿಕಾ ಅದಾಲತ್ ಆಯೋಜಿಸಲು ಯೋಚಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಗಾಮನಗಟ್ಟಿ ಕೈಗಾರಿಕಾ ವಸಹಾತು ಹಾಗೂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ವೀಕ್ಷಣೆ ನಡೆಸಿದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ರಾಜ್ಯಾದ್ಯಾಂತ ಹಲವು ಕೈಗಾರಿಕಾ ವ್ಯಾಜ್ಯಗಳು ಬಹು ವರ್ಷಗಳಿಂದ ಬಗೆಹರಿಯದೆ ಉಳಿದಿವೆ. ಇವನ್ನು ದಾವೆದಾರರ ಸಮಕ್ಷಮದಲ್ಲಿ ಸುಲಭವಾಗಿ ಬಗೆಹರಿಸಿಕೊಳ್ಳಬಹುದು. ಇದರಿಂದ ಕೈಗಾರಿಕೆಗಳ ಸ್ಥಾಪನೆ ಹಾಗೂ ಅಭಿವೃದ್ಧಿಗೆ ಸಹಾಯಕವಾಗಲಿದೆ. ಈ ಕುರಿತಂತೆ ರಾಜ್ಯ ಸರ್ಕಾರ ಬರುವ ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಿನಲ್ಲಿ ಕೈಗಾರಿಕಾ ಅದಾಲತ್ ಆಯೋಜಿಸಲಿದೆ ಎಂದರು.
ಗಾಮನಗಟ್ಟಿ ವಾಸಹಾತು ವಸತಿ ಸಮುಚ್ಚಯಗಳ ಹಂಚಿಕೆ
ಗಾಮನಗಟ್ಟಿ ವಸಹಾತು ಪ್ರದೇಶದಲ್ಲಿ ಕೆ.ಐ.ಡಿ.ಬಿ ವತಿಯಿಂದ ನಿರ್ಮಿಸಲಾಗಿರುವ ವಸತಿ ಸಮುಚ್ಚಯಗಳಿಗೆ ಭೇಟಿ ನೀಡಿದ ಅವರು, ಶೀಘ್ರವಾಗಿ ವಸತಿ ಸಮುಚ್ಚಯಗಳ ಹಂಚಿಕೆಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಕೆ.ಐ.ಡಿ.ಬಿ ವತಿಯಿಂದ 108 ಸಿಂಗಲ್ ಬಿ.ಹೆಚ್.ಕೆ ಹಾಗೂ 72 ಡಬಲ್ ಬಿ.ಹೆಚ್.ಕೆ. ವಸತಿಗಳನ್ನು ನಿರ್ಮಿಸಲಾಗಿದೆ. ಸಿಂಗಲ್ ಬಿ.ಹೆಚ್.ಕೆ 11 ಲಕ್ಷ ಹಾಗೂ ಡಬಲ್ ಬಿ.ಹೆಚ್.ಕೆ.ಗೆ 14 ಲಕ್ಷ ರೂಪಾಯಿ ದರ ನಿಗದಿಮಾಡಲಾಗಿದ್ದು, ಕೈಗಾರಿಕಾ ವಸಹಾತುವಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಹಂಚಿಕೆ ಮಾಡಲಾಗುವುದು. ಕೈಗಾರಿಕೋದ್ಯಮಿಗಳು ಸದ್ಯ ನಿಗದಿ ಪಡಿಸಿದ ದರು ಅಧಿಕವಾಗಿದೆ ಎಂದಿದ್ದಾರೆ. ಈ ಕುರಿತು ಮುಂದಿನ ಕೆ.ಐ.ಡಿ.ಬಿ ಸಭೆಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ನೂಲ್ವಿ ಕ್ರಾಸ್ ಮೇಲ್ಸೇತುವೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ವೀಕ್ಷಣೆ ನೆಡಿಸಿದ ಸಚಿವರು ನೂಲ್ವಿ ಕ್ರಾಸ್ ಬಳಿ ಮೇಲ್ಸೇತುವೆ ನಿರ್ಮಿಸುವಂತೆ ನೂಲ್ವಿ ಗ್ರಾಮಸ್ಥರು ನೀಡಿದ ಮನವಿ ಸ್ವೀಕರಿಸಿ, ಸೇತುವೆ ನಿರ್ಮಿಸಲು ಕೇಂದ್ರ ಸರ್ಕಾರಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮೂಲಕ ಪ್ರಸ್ತವಾನೆ ಸಲ್ಲಿಸಲಾಗುವುದು ಎಂದು ಹೇಳಿದರು. ನೂಲ್ವಿ ಕ್ರಾಸ್ ರಸ್ತೆ ಗದಗ ಜಿಲ್ಲೆಯ ಲಕ್ಷ್ಮೇಶ್ವರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದೆ. ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಹಾಗೂ ರೈತರಿಗೆ ಅನುಕೂಲವಾಗುವಂತೆ ಸೇತುವೆ ನಿರ್ಮಾಣದ ನೀಲನಕ್ಷೆಯನ್ನು ಸಿದ್ಧಪಡಿಸಲಾಗುವುದು ಎಂದರು.
ಹುಬ್ಬಳ್ಳಿ ನಗರದ ವರ್ತುಲ ರಸ್ತೆ ಕಾಮಗಾರಿ 6 ತಿಂಗಳಲ್ಲಿ ಪೂರ್ಣಗೊಳ್ಳಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 15 ಕಿ.ಮೀ. ವರ್ತುಲ ರಸ್ತೆಯಲ್ಲಿ 12.5 ಕಿ.ಮೀ. ರಸ್ತೆಯನ್ನು ಈಗಾಗಲೇ ನಿರ್ಮಿಸಿದೆ. ಗಬ್ಬೂರು ಬಳಿಯ ಸೇತುವೆ ನಿರ್ಮಾಣ ಕಾಮಗಾರಿ ಬಾಕಿ ಇದ್ದು, ಆದಷ್ಟು ಬೇಗ ಪೂರ್ಣಗೊಳಿಸಲಾಗುವುದು. ವರ್ತುಲ ರಸ್ತೆ ನಿರ್ಮಾಣದಿಂದ ಕಾರವಾರ, ಗದಗ ಹಾಗೂ ವಿಜಯಪುರ ರಸ್ತೆಗಳಿಗೆ ನೇರವಾಗಿ ರಾಷ್ಟ್ರೀಯ ಹೆದ್ದಾರಿ ಸೂಕ್ತ ಸಂಪರ್ಕ ಲಭಿಸಲಿದೆ. ಇದರೊಂದಿಗೆ ಹುಬ್ಬಳ್ಳಿ-ಧಾರವಾಡ ನಗರದ ನಡುವೆ 6 ಪಥಗಳ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೂ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.