ಲಂಡನ್: ವಿಶ್ವಕಪ್ ಶುರುಗೊಳ್ಳಲು ಕೇವಲ ಮೂರು ದಿನಗಳು ಮಾತ್ರ ಬಾಕಿ. ಪ್ರತಿಯೊಂದು ಪಂದ್ಯ ವೀಕ್ಷಣೆ ಮಾಡಲು ಕ್ರೀಡಾಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದು, ಅದರಲ್ಲೂ ತಮ್ಮ ತಮ್ಮ ನೆಚ್ಚಿನ ತಂಡದ ಪಂದ್ಯ ಕಣ್ತುಂಬಿಕೊಳ್ಳಲು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.
11 ಮೈದಾನಗಳಲ್ಲಿ 46 ದಿನಗಳ ಕಾಲ 48 ಪಂದ್ಯಗಳು ನಡೆಯಲಿದ್ದು, ಇದರಲ್ಲಿ ಎರಡು ಸೆಮಿಫೈನಲ್ ಹಾಗೂ ಒಂದು ಫೈನಲ್ ಪಂದ್ಯ ಕೂಡಾ ಇದೆ. 45 ಲೀಗ್ ಪಂದ್ಯಗಳಲ್ಲಿ ಅತಿ ಹೆಚ್ಚು ಹಾಗೂ ಹೈವೋಲ್ಟೇಜ್ ಎಂಬ ಖ್ಯಾತಿಗೆ ಪಾತ್ರವಾಗಿರುವುದು ಜೂನ್ 16ರಂದು ನಡೆಯಲಿರುವ ಇಂಡೋ - ಪಾಕ್ ನಡುವಿನ ಕದನ ಹಾಗೂ ಜೂನ್ 25ರಂದು ನಡೆಯಲಿರುವ ಇಂಗ್ಲೆಂಡ್-ಆಸ್ಟ್ರೇಲಿಯಾ ನಡುವಿನ ಹಣಾಹಣಿ.
ಜಮ್ಮು-ಕಾಶ್ಮೀರದ ಪುಲ್ವಾಮಾ ದಾಳಿ ನಡೆದ ಬಳಿಕ ವಿಶ್ವಕಪ್ನಲ್ಲಿ ಭಾರತ ತಂಡ ಪಾಕ್ ವಿರುದ್ಧದ ಪಂದ್ಯ ಆಡಬಾರದು ಎಂಬ ಮಾತು ಕೇಳಿ ಬಂದಿತ್ತು. ಇದರ ಮಧ್ಯೆ ಕೂಡ ಉಭಯ ತಂಡಗಳು ಮುಖಾಮುಖಿಯಾಗುತ್ತಿರುವುದು ಬಹಳಷ್ಟು ರೋಚಕತೆ ಪಡೆದುಕೊಂಡಿದೆ. ಇನ್ನು ಬಾಲ್ ಟ್ಯಾಂಪ್ರಿಂಗ್ ಮಾಡಿದ ಆರೋಪದ ಮೇಲೆ ತಂಡದಿಂದ ಹೊರಗುಳಿದಿದ್ದ ಸ್ಮಿತ್, ವಾರ್ನರ್ ಇದೀಗ ತಂಡ ಸೇರಿಕೊಂಡಿದ್ದು, ಅವರಿಗೆ ಇಂಗ್ಲೆಂಡ್ನಲ್ಲಿ ಈಗಾಗಲೇ ಅವಮಾನ ಮಾಡಲಾಗಿರುವ ಕಾರಣ, ಈ ಪಂದ್ಯ ಮತ್ತಷ್ಟು ರೋಚಕತೆ ಪಡೆದುಕೊಂಡಿದೆ.
ಟೀಂ ಇಂಡಿಯಾ-ಪಾಕ್ ನಡುವಿನ ಪಂದ್ಯದ ಟಿಕೆಟ್ ಈಗಾಗಲೇ ಸೋಲ್ಡ್ಔಟ್ ಆಗಿವೆ. ಒಟ್ಟು 25 ಸಾವಿರ ವೀಕ್ಷಕರು ಈ ಪಂದ್ಯ ವೀಕ್ಷಣೆ ಮಾಡಲಿದ್ದಾರೆ. ವಿಶ್ವಕಪ್ ಇತಿಹಾಸದಲ್ಲಿ ಇಲ್ಲಿಯವರೆಗೆ ಟೀಂ ಇಂಡಿಯಾ ಪಾಕ್ ವಿರುದ್ಧ ಯಾವುದೇ ಪಂದ್ಯದಲ್ಲೂ ಸೋಲು ಕಂಡಿಲ್ಲ ಎಂಬುದು ಗಮನಾರ್ಹ.