ಲಂಡನ್: ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಹಾಗೂ ಕಳೆದೆರಡು ಪಂದ್ಯಗಳಲ್ಲಿ ಫಲಿತಾಂಶ ಕಾಣದಿರುವ ಶ್ರೀಲಂಕಾ ತಂಡಗಳು ಇಂದು ಲಂಡನ್ನ ಕೆನ್ನಿಂಗ್ಟನ್ ಓವೆಲ್ನಲ್ಲಿ ಮುಖಾಮುಖಿಯಾಗುತ್ತಿವೆ.
ಆಸ್ಟ್ರೇಲಿಯಾ 2019 ರ ವಿಶ್ವಕಪ್ನಲ್ಲಿ 3 ಗೆಲುವು ಹಾಗೂ ಒಂದು ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ 3 ನೇ ಸ್ಥಾನದಲ್ಲಿದೆ. ಅಫ್ಘಾನಿಸ್ತಾನದ ವಿರುದ್ಧ ಅಧಿಕಾರಯುತ ಗೆಲುವು ಸಾಧಿಸಿದ ಆಸೀಸ್ ಪಡೆ ನಂತರ ವಿಂಡೀಸ್ ವಿರುದ್ಧ ರೋಚಕ ಜಯ ಸಾಧಿಸಿತ್ತು. ಆದರೆ ಭಾರತ ತಂಡದೆದರು 36 ರನ್ಗಳಿಂದ ಸೋಲುವ ಮೂಲಕ ಟೂರ್ನಿಯಲ್ಲಿ ಮೊದಲ ಬಾರಿಗೆ ಹಿನ್ನಡೆಯನುಭವಿಸಿತ್ತು. ಮತ್ತೆ ಪಾಕಿಸ್ತಾನ ವಿರುದ್ಧ ಗೆಲುವು ಸಾಧಿಸುವ ಮೂಲಕ ಗೆಲುವಿನ ಹಳಿಗೆ ಮರಳಿದೆ.
ವಾರ್ನರ್,ನಾಯಕ ಫಿಂಚ್, ಕ್ಯಾರಿ ಹಾಗೂ ಸ್ಮಿತ್ ಉತ್ತಮ ಫಾರ್ಮ್ನಲ್ಲಿದ್ದಾರೆ, ಆದರೆ, ಆಲ್ರೌಂಡರ್ ಮ್ಯಾಕ್ಸ್ವೆಲ್ ಮಾತ್ರ ಒಂದೂ ಪಂದ್ಯದಲ್ಲೂ ತಮ್ಮ ನೈಜ ಆಟ ಪ್ರದರ್ಶಿಸಿಲ್ಲ. ಇದು ಆಸ್ಟ್ರೇಲಿಯ ತಂಡಕ್ಕೆ ತಲರನೋವಾಗಿದೆ. ಉಳಿದಂತೆ ಬೌಲಿಂಗ್ನಲ್ಲಿ ಕೌಲ್ಟರ್ ನೈಲ್,ಸ್ಟಾರ್ಕ್, ಕಮ್ಮಿನ್ಸ್ ಉತ್ತಮ ಲಯದಲ್ಲಿರುವುದರಿಂದ ಲಂಕಾ ವಿರುದ್ಧ ಆಸೀಸ್ ಗೆಲುವಿನ ನೆಚ್ಚಿನ ತಂಡವಾಗಿದೆ.
ಇನ್ನು ಲಂಕಾ 4 ಪಂದ್ಯಗಳನ್ನಾಡಿದ್ದು, ಮೊದಲ ಪಂದ್ಯದಲ್ಲಿ ಕಿವೀಸ್ ವಿರುದ್ಧ 10 ವಿಕೆಟ್ಗಳ ಹೀನಾಯ ಸೋಲನುಭವಿಸಿ ನಂತರ ಅಫ್ಘಾನಿಸ್ತಾನದೆದುರು 34ರನ್ಗಳಿಂದ ಗೆಲವು ಸಾಧಿಸುವ ಮೂಲಕ ಗೆಲುವಿ ಸಿಹಿ ಅನುಭವಿಸಿತ್ತು. ಆದರೆ ಬಾಂಗ್ಲಾ ಹಾಗೂ ಪಾಕಿಸ್ತಾನದ ವಿರುದ್ಧದ ಪಂದ್ಯಗಳು ಮಳೆಗಾಹುತಿಯಾಗಿದ್ದರಿಂದ ಲಂಕಾ ತಂಡ 2 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ 5 ನೇಸ್ಥಾನಕ್ಕೇರಿದೆ.
ಅನುಭವಿ ಮಲಿಂಗಾ, ಲಕ್ಮಲ್ ಹಾಗೂ ಉದಾನರಂತಹ ವೇಗಿಗಳು ತಂಡದ ಆಧಾರ ಸ್ಥಂಭಗಳಾಗಿದ್ದಾರೆ, ಬ್ಯಾಟಿಂಗ್ನಲ್ಲಿ ಮಾತ್ರ ಕುಶಾಲ್ ಪೆರೆರಾ ಹಾಗೂ ನಾಯಕ ಕರುಣರತ್ನೆ ಬಿಟ್ಟರೆ ಉಳಿದ ಬ್ಯಾಟ್ಸ್ಮನ್ಗಳು ಸಂಪೂರ್ಣ ವಿಫಲವಾಗಿದ್ದಾರೆ. ಇಂದಿನ ಪಂದ್ಯದಲ್ಲಿ ಬಲಿಷ್ಠ ಆಸೀಸ್ ಎದುರು ಕಣಕ್ಕಿಳಿಯುತ್ತಿರುವುದರಿಂದ ಅನುಭವಿ ಮ್ಯಾಥ್ಯೂಸ್, ಕುಶಾಲ್ ಮೆಂಡಿಸ್ ಧನಂಜಯ್ ಡಿ ಸಿಲ್ವಾ ಕ್ರೀಸ್ನಲ್ಲಿ ಹೆಚ್ಚು ಹೊತ್ತು ನಿಂತರೆ ಮಾತ್ರ ಆಸೀಸ್ಗೆ ಪೈಪೋಟಿ ನೀಡಲು ಸಾಧ್ಯವಾಗುತ್ತದೆ.
ವಿಶ್ವಕಪ್ ಮುಖಾಮುಖಿ:
ಎರಡು ತಂಡಗಳು ವಿಶ್ವಕಪ್ನಲ್ಲಿ9 ಬಾರಿ ಮುಖಾಮುಖಿಯಾಗಿದ್ದು 5 ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ 7 ಪಂದ್ಯ ಹಾಗೂ ಶ್ರೀಲಂಕಾ 1 ಪಂದ್ಯದಲ್ಲಿ ಜಯ ಸಾಧಿಸಿದೆ. ಲಂಕಾ 1996ರ ವಿಶ್ವಕಪ್ ಫೈನಲ್ನಲ್ಲಿ ಆಸೀಸ್ ತಂಡವನ್ನು ಮಣಿಸಿ ಚಾಂಪಿಯನ್ ಆಗಿತ್ತು. 1996 ಲೀಗ್ ಪಂದ್ಯದಲ್ಲಿ ಭದ್ರತಾ ಕಾರಣ ನೀಡಿ ಆಸೀಸ್ ಲಂಕಾಗೆ ತೆರಳಿರಲಿಲ್ಲ.
ಸಂಭಾವ್ಯ ತಂಡಗಳು:
ಶ್ರೀಲಂಕಾ ತಂಡ:
ದಿಮುತ ಕರುಣಾರತ್ನೆ (ನಾಯಕ), ಧನಂಜಯ್ ಡಿ ಸಿಲ್ವಾ, ಸುರಂಗ ಲಕ್ಮಲ್, ಲಸಿತ್ ಮಲಿಂಗ, ಏಂಜೆಲೊ ಮ್ಯಾಥ್ಯೂಸ್, ಕುಶಾಲ್ ಮೆಂಡಿಸ್, ಕುಶಾಲ್ ಪೆರೆರ, ತಿಸಾರ ಪೆರೆರ, ಲಾಹಿರು ತಿರುಮನ್ನೆ, ಇಸುರು ಉದಾನ, ಜೀವನ್ ಮೆಂಡಿಸ್
ಆಸ್ಟ್ರೇಲಿಯಾ ತಂಡ:
ಡೇವಿಡ್ ವಾರ್ನರ್, ಆ್ಯರೋನ್ ಫಿಂಚ್, ಉಸ್ಮಾನ್ ಖವಾಜಾ, ಸ್ಟೀವ್ ಸ್ಮೀತ್, ಗ್ಲೆನ್ ಮ್ಯಾಕ್ಸ್ವೆಲ್, ಶಾನ್ ಮಾರ್ಶ್, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮಿನ್ಸ್, ನಥನ್ ಕೌಲ್ಟರ್ ನೈಲ್, ಕೇನ್ ರಿಚರ್ಡ್ಸ್ನ್, ಮಿಚೆಲ್ ಸ್ಟಾರ್ಕ್