ಕೋಲ್ಕತ್ತಾ: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಅಬ್ಬರಿಸುತ್ತಿರುವ ವೆಸ್ಟ್ ಇಂಡೀಸ್ನ ದೈತ್ಯ ಆಟಗಾರ ಆಂಡ್ರೆ ರಸೆಲ್ ಇದೀಗ ತಮ್ಮ ತಂಡದ ವಿರುದ್ದವೇ ಅಸಮಾಧಾನ ಹೊರಹಾಕಿದ್ದಾರೆ.
ಆರಂಭದಲ್ಲಿ ತಾನು ಆಡಿದ್ದ ಕೆಲ ಪಂದ್ಯಗಳಲ್ಲಿ ಗೆಲುವು ದಾಖಲು ಮಾಡಿದ್ದ ಕೆಕೆಆರ್ ಬಳಿಕ ಸತತ ಆರು ಪಂದ್ಯಗಳಲ್ಲಿ ಸೋಲು ಕಂಡಿದೆ. ಇದಕ್ಕೆ ತಂಡದಲ್ಲಿರುವ ಕೆಲ ಪ್ಲೇಯರ್ಸ್ ತೆಗೆದುಕೊಂಡಿರುವ ಕೆಟ್ಟ ನಿರ್ಧಾರವೇ ಕಾರಣವಾಗಿದ್ದು, ಅದು ತಂಡದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ತಿಳಿಸಿದ್ದಾರೆ. ನಮ್ಮ ತಂಡ ಉತ್ತಮವಾಗಿದ್ದು, ಆದರೆ ತೆಗೆದುಕೊಳ್ಳುತ್ತಿರುವ ನಿರ್ಧಾರ ಸರಿಯಾಗಿಲ್ಲ. ಅದರಿಂದ ನಾವು ಪಂದ್ಯದಲ್ಲಿ ಸೋಲು ಕಾಣುವಂತಾಗುತ್ತಿದೆ ಎಂದಿದ್ದಾರೆ.
ಈಗಲೂ ಸಮಯ ಮಿಂಚಿಲ್ಲ. ಮುಂದಿನ ಪಂದ್ಯಗಳಲ್ಲಿ ಸರಿಯಾದ ಸಂದರ್ಭದಲ್ಲಿ ಸರಿಯಾದ ಬೌಲರ್ಗಳಿಂದ ಬೌಲ್ ಮಾಡಿಸಿದಾಗ ಖಂಡಿತವಾಗಿಯೂ ನಾವು ಗೆಲ್ಲುತ್ತೇವೆ ಎಂದರು. ಓರ್ವ ವೃತ್ತಿಪರ ಕ್ರಿಕೆಟಿಗನಾಗಿ ಹೇಗೆ ಕ್ರಿಕೆಟ್ ಆಡಬೇಕು ಎಂಬುದನ್ನು ನಾವು ಯಾರಿಗೂ ಕಲಿಸಿಕೊಡಬೇಕಾಗಿಲ್ಲ ಎಂದು ಇದೇ ವೇಳೆ ಅವರು ತಿಳಿಸಿದ್ದಾರೆ. ರಾಜಸ್ಥಾನ ರಾಯಲ್ಸ್ ವಿರುದ್ಧ ನಮ್ಮ ತಂಡ ಸೋಲು ಕಂಡಿದ್ದು ನಿಜಕ್ಕೂ ನನಗೆ ತುಂಬಾ ನೋವುಂಟು ಮಾಡಿದೆ ಎಂದು ಇದೇ ವೇಳೆ ತಿಳಿಸಿದರು.