ಬೆಂಗಳೂರು : ಕೋವಿಡ್ ಸೋಂಕು ತೀವ್ರವಾಗಿ ವ್ಯಾಪಿಸುತ್ತಿರುವ ರಾಜ್ಯದ 5 ಜಿಲ್ಲೆಗಳ ನ್ಯಾಯಾಲಯಗಳ ಕಾರ್ಯ ಕಲಾಪನ್ನು ಹೈಕೋರ್ಟ್ ಸಂಪೂರ್ಣ ಆನ್ಲೈನ್ ಮೂಲಕವೇ ನಡೆಸುವಂತೆ ಎಸ್ಒಪಿ ಜಾರಿ ಮಾಡಿದೆ. ಬೆಂಗಳೂರು ನಗರ, ಮೈಸೂರು, ತುಮಕೂರು, ಬಳ್ಳಾರಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಇದು ಅನ್ವಯಿಸಲಿದೆ. ಈ ಜಿಲ್ಲೆಗಳಲ್ಲಿ 10 ಸಾವಿರಕ್ಕೂ ಅಧಿಕ ಕೋವಿಡ್ ಸೋಂಕಿತರಿದ್ದು, ಸೋಂಕು ವ್ಯಾಪಿಸುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಅದರಂತೆ ಕೋರ್ಟ್ ಕಾರ್ಯ ಕಲಾಪಗಳನ್ನು ಪೂರ್ಣ ಪ್ರಮಾಣದಲ್ಲಿ ಆನ್ಲೈನ್ಗೆ ಸೀಮಿತಗೊಳಿಸಲಾಗಿದ್ದು, ಹೈಕೋರ್ಟ್ ಮುಂದಿನ ಆದೇಶದವರೆಗೆ ಈ ನಿಯಮಗಳು ಜಾರಿಯಲ್ಲಿ ಇರಲಿವೆ.
- ನ್ಯಾಯಾಲಯಗಳಿಗೆ ಕಕ್ಷಿದಾರರು, ಪಾರ್ಟಿ-ಇನ್-ಪರ್ಸನ್, ಸಂದರ್ಶಕರು, ವಕೀಲರ ಗುಮಾಸ್ತರು ಹಾಗೂ ವಕೀಲರಿಗೆ ಕೋರ್ಟ್ ಆವರಣ ಪ್ರವೇಶ ನಿಷೇಧಿಸಲಾಗಿದೆ.
- ರಜಾ ಕಾಲದ ವಿಚಾರಣೆ ವೇಳೆ ಅರ್ಜಿ ಸಲ್ಲಿಸಬೇಕಿದ್ದಲ್ಲಿ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು ಮತ್ತು ವಿಡಿಯೋ ಕಾನ್ಪರೆನ್ಸ್ ಮೂಲಕವಷ್ಟೇ ವಿಚಾರಣೆ ನಡೆಸಬೇಕು.
- ಕ್ರಿಮಿನಲ್ ಪ್ರಕರಣಗಳಲ್ಲಿ ಸಾಕ್ಷ್ಯ ದಾಖಲಿಸಲು ಆರೋಪಿಗಳನ್ನು ನ್ಯಾಯಾಲಯಗಳಿಗೆ ನೇರವಾಗಿ ಹಾಜರುಪಡಿಸುವಂತಿಲ್ಲ.
- ಎಲ್ಲ ರೀತಿಯ ಅರ್ಜಿಗಳನ್ನು-ಮನವಿಗಳನ್ನು ಆನ್ಲೈನ್ (ಸಿಎಸ್ಐ) ಅಥವಾ ಇ-ಮೇಲ್ (ಸ್ಕ್ಯಾನ್ಡ್ ಕಾಪಿ) ಮೂಲಕವೇ ಸಲ್ಲಿಸಬೇಕು. ಇ-ಮೇಲ್ ಮೂಲಕ ಕಳುಹಿಸುವುದಿದ್ದರೆ ಈ ಕೆಳಗಿನ ಇ-ಮೇಲ್ ವಿಳಾಸಗಳಿಗೆ ಕಳುಹಿಸಬೇಕು. ಮತ್ತದೇ ಇ-ಮೇಲ್ ವಿಳಾಸಕ್ಕೆ ವಿಡಿಯೋ ಕಾನ್ಫರೆನ್ಸ್ ನ ಲಿಂಕನ್ನು ನ್ಯಾಯಾಲಯಗಳಿಂದ ಕಳುಹಿಸಲಾಗುತ್ತದೆ.
- ಬೆಂಗಳೂರು ನಗರ : ಸಿಟಿ ಸಿವಿಲ್ ಕೋರ್ಟ್ – ccc-blru@hck.gov.in ಸಣ್ಣ ಪ್ರಕರಣಗಳ ನ್ಯಾಯಾಲಯಗಳು – scc-blr@hck.gov.in
ಮುಖ್ಯ ಮಹಾನಗರ ದಂಡಾಧಿಕಾರಿ(ಸಿಎಂಎಂ) ನ್ಯಾಯಾಲಯಗಳು – cmmblr@hck.gov.in
ಕೌಟುಂಬಿಕ ನ್ಯಾಯಾಲಯಗಳು – nyayadegula-blr@hck.gov.in - ಮೈಸೂರು – pdj-mysuru@hck.gov.in
- ತುಮಕೂರು – pdj-tumakuru@hck.gov.in
- ಬಳ್ಳಾರಿ – filingpdjballari@gmail.com
- ಬೆಂಗಳೂರು ಗ್ರಾಮಾಂತರ – pdj-blrr@hck.gov.in
- ಜಾಮೀನು ಅರ್ಜಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕವೇ ವಿಚಾರಣೆ ನಡೆಸಬೇಕು.
- ರಿಮ್ಯಾಂಡ್ ವೇಳೆ ಆರೋಪಿಯನ್ನು ನೇರವಾಗಿ ಹಾಜರುಪಡಿಸಿದರೆ ಮಾತ್ರ ವಕೀಲರು ಹಾಜರಾಗಬಹುದು.
- ಬಾಕಿ ಪ್ರಕರಣಗಳಲ್ಲಿ ವಿಚಾರಣೆ ತುರ್ತು ಅಗತ್ಯವಿದ್ದರೆ ಇ-ಮೇಲ್ ಮೂಲಕ ಮೆಮೋ ಸಲ್ಲಿಸಬೇಕು. ಒಂದು ವೇಳೆ ವಿಚಾರಣೆಗೆ ಪರಿಗಣಿಸಿದರೆ ಇ-ಮೇಲ್ ಮೂಲಕವೇ ವಿಚಾರಣಾ ದಿನಾಂಕ ತಿಳಿಸಬೇಕು.
- ಪ್ರಧಾನ ಜಿಲ್ಲಾ ನ್ಯಾಯಾಧೀಶರು, ಸೆಷನ್ಸ್ ನ್ಯಾಯಾಧೀಶರು ಹಾಗೂ ಮುಖ್ಯ ನ್ಯಾಯಾಧೀಶರು ಕಡಿಮೆ ಸಿಬ್ಬಂದಿ ಬಳಸುವುದು ಮತ್ತು ಹೆಡ್ ಕ್ವಾರ್ಟರ್ ನಲ್ಲಿರದೇ ಹೊರಗಿನಿಂದ ಪ್ರಯಾಣಿಸಿ ಬರುವವರನ್ನು ಕೋರ್ಟ್ ಒಳಗೆ ಅನುಮತಿಸದಿರುವುದು.
- 5 ಜಿಲ್ಲೆಗಳ ಪ್ರಧಾನ ಜಿಲ್ಲಾ ನ್ಯಾಯಾಧೀಶರು, ಸೆಷನ್ಸ್ ನ್ಯಾಯಾಧೀಶರು ಹಾಗೂ ಮುಖ್ಯ ನ್ಯಾಯಾಧೀಶರು ಜಾಮೀನು ಅರ್ಜಿಗಳನ್ನು ವಿಚಾರಣೆ ನಡೆಸಲು ಹೆಡ್ ಕ್ವಾರ್ಟರ್ ನಲ್ಲೇ ಉಳಿಯುವ ನ್ಯಾಯಾಂಗ ಅಧಿಕಾರಿಗಳಿಗೆ ಉಸ್ತುವಾರಿ ನೀಡುವುದು, ರಿಮ್ಯಾಂಡ್ ಅರ್ಜಿಗಳನ್ನು ಆಯಾ ಕ್ಷೇತ್ರ ವ್ಯಾಪ್ತಿಯ ಮ್ಯಾಜಿಸ್ಟ್ರೇಟ್ ಗಳೇ ನಿರ್ಧರಿಸುವುದು
ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ಅವರ ಆದೇಶದ ಮೇರೆಗೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಟಿ.ಜಿ ಶಿವಶಂಕರೇಗೌಡ ಅವರು ಈ ನೋಟಿಫಿಕೇಷನ್ ಹೊರಡಿಸಿದ್ದು, ಮುಂದಿನ ಆದೇಶದವರೆಗೆ ಇವೇ ನಿಯಮಗಳನ್ನು ನ್ಯಾಯಾಲಯಗಳು ಪಾಲಿಸಲಿವೆ.