ಬೆಂಗಳೂರು: ನಗರದ ಮೆಟ್ರೋ ರೈಲು ಮಾರ್ಗ ನಿರ್ಮಾಣಕ್ಕೆ ಮರಗಳನ್ನು ಕಡಿಯುವ ಮತ್ತು ಸ್ಥಳಾಂತರಿಸುವ ಪ್ರಕ್ರಿಯೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶಿಸಿದೆ.
ಮೆಟ್ರೋ ಯೋಜನೆ ಸೇರಿದಂತೆ ಅಭಿವೃದ್ಧಿ ಕಾರ್ಯಗಳಿಗೆ ಮರಗಳನ್ನು ಕಡಿಯುತ್ತಿರುವುದನ್ನು ಪ್ರಶ್ನಿಸಿ ನಗರದ ದತ್ತಾತ್ರೇಯ ಟಿ. ದೇವರೆ ಹಾಗೂ ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಬಿಎಂಆರ್ಸಿಎಲ್ ಪರ ವಕೀಲರು ವಾದಿಸಿ, ಮರ ಪ್ರಾಧಿಕಾರ ಮತ್ತು ತಜ್ಞರ ಸೂಚನೆ ಮೇರೆಗೆ ಮರಗಳನ್ನು ತೆರವು ಮಾಡಲಾಗಿದೆ. ಈಗಾಗಲೇ ಸಾಕಷ್ಟು ಮರಗಳನ್ನು ಸ್ಥಳಾಂತರಿಸಲಾಗಿದೆ ಎಂದು ವಿವರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಮರ ಕಡಿಯುವ ಮತ್ತು ಸ್ಥಳಾಂತರಿಸುವ ವಿಚಾರದಲ್ಲಿ ಬಿಎಂಆರ್ಸಿಎಲ್ ಅರ್ಜಿಗಳನ್ನು ಪರಿಶೀಲಿಸಲು ನಿಯೋಜಿಸಿದ್ದ ಮರ ಪ್ರಾಧಿಕಾರ ಮತ್ತು ತಜ್ಞರ ಸಮಿತಿ ನಿರ್ಣಯ ಕೈಗೊಳ್ಳುವಾಗ ಸೂಕ್ತವಾಗಿ ಪರಿಶೀಲಿಸಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿತು.
ಈ ಕುರಿತು ಮರ ಪ್ರಾಧಿಕಾರದ ಅಧಿಕಾರಿ ಮರಗಳನ್ನು ಸ್ಥಳಾಂತರ ಮಾಡಿರುವ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಮರಗಳನ್ನು ಸ್ಥಳಾಂತರಿಸುವ ಕಾರ್ಯ ಅರಣ್ಯಾಧಿಕಾರಿಗಳ ತಾಂತ್ರಿಕ ಮೇಲುಸ್ತುವಾರಿಯಲ್ಲಿ ನಡೆದಿದೆಯೇ ಎಂಬುದರ ವರದಿಯನ್ನು ನೀಡಬೇಕು ಎಂದು ಸೂಚಿಸಿತು. ಅಲ್ಲದೆ ಮುಂದಿನ ಆದೇಶದವರೆಗೆ ಮೆಟ್ರೋ ಯೋಜನೆಗೆ ಮರಗಳನ್ನು ಕಡಿಯಬಾರದು ಎಂದು ಆದೇಶಿಸಿತು.
ಸ್ಥಳಾಂತರಿಸಿದ ಮರಗಳನ್ನು ಮುಂದಿನ ಮೂರು ವರ್ಷಗಳ ಕಾಲ ಬಿಎಂಆರ್ಸಿಎಲ್ ಆಡಳಿತವೇ ನೋಡಿಕೊಳ್ಳಬೇಕು ಎಂದು ನಿರ್ದೇಶಿಸಿ ವಿಚಾರಣೆಯನ್ನು ಜೂನ್ 19ಕ್ಕೆ ಮುಂದೂಡಿತು.