ಚಾಮರಾಜನಗರ: ಮಂಗಳವಾರ ರಾತ್ರಿ ಸುರಿದ ಭಾರೀ ಮಳೆಗೆ ಐತಿಹಾಸಿಕ ದೊಡ್ಡರಸಿನ ಕೊಳಕ್ಕೆ ನೀರು ಹರಿದು ಬಂದಿದ್ದು ನಗರದ ನಿವಾಸಿಗಳಲ್ಲಿ ಹರ್ಷ ಮೂಡಿಸಿದೆ. ದಶಕದ ಬಳಿಕ ಕಳೆದ ವರ್ಷ ಸುರಿದ ಭರ್ಜರಿ ಮಳೆಗೆ ದೊಡ್ಡರಸಿನ ಕೊಳ ಭರ್ತಿಯಾಗಿತ್ತು. ಈಗ ನಿನ್ನೆ ರಾತ್ರಿ ಸುರಿದ ಮಳೆಗೆ ದೊಡ್ಡರಸಿನ ಕೊಳಕ್ಕೆ ಮತ್ತೆ ನೀರು ಬಂದಿದ್ದು ಸುತ್ತಮುತ್ತಲಿನ ಪ್ರದೇಶಗಳ ಅಂತರ್ಜಲ ವೃದ್ಧಿಗೆ ಸಹಾಯಕವಾಗಿದೆ ಎನ್ನಲಾಗುತ್ತಿದೆ.
ಇನ್ನು ಐತಿಹಾಸಿಕ ಕೊಳದ ಕುರಿತು ಈ ಟಿವಿ ಭಾರತ್ ಜೊತೆ ಮಾತನಾಡಿದ ಸ್ಥಳೀಯ ಜಯಕುಮಾರ್, ನಗರಸಭೆಯು ಈ ಐತಿಹಾಸಿಕ ಕೊಳವನ್ನು ಅಭಿವೃದ್ಧಿಪಡಿಸಬೇಕು. ಇದರ ಜೊತೆಗೆ ಪಟ್ಟಣದ ಮುಖ್ಯ ಜಲಮೂಲವನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದರು.
ಶಿಥಿಲಾವಸ್ಥೆ ತಲುಪಿದ ಪಟ್ಟಣದ ಪೊಲೀಸ್ ಠಾಣೆ: ಶಿಥಿಲಾವಸ್ಥೆಗೆ ತಲುಪಿರುವ ಪಟ್ಟಣದ ಪೊಲೀಸ್ ಠಾಣಾ ಕಟ್ಟಡಕ್ಕೆ ರಾತ್ರಿ ಸುರಿದ ಭಾರೀ ಮಳೆಗೆ ನೀರು ನುಗ್ಗಿದೆ. ಪರಿಣಾಮ ಸಮಾಜದ ಸುವ್ಯವಸ್ಥೆ ಕಾಪಾಡುವ ಪೊಲೀಸರೇ ಇಲ್ಲಿ ಭಯದಿಂದ ಕೆಲಸ ಮಾಡುವ ಪರಿಸ್ಥಿತಿ ಬಂದೊಂದಗಿದೆ. ಠಾಣೆಯ ಒಳಗೆ ನೀರು ನುಗ್ಗುವ ಜೊತೆಗೆ ಚಕ್ಕೆಗಳು ಉದುರುತ್ತಿದ್ದು ಗೋಡೆ ಬೀಳುವ ಭಯದಲ್ಲೇ ಕಾರ್ಯ ನಿರ್ವಬೇಕಾದ ಪರಿಸ್ಥಿತಿ ಇಲ್ಲಿದೆ ಎಂದು ಹೆಸರು ಹೇಳದ ಪೇದೆಯೊಬ್ಬರು ಅಳಲು ತೋಡಿಕೊಂಡಿದ್ದಾರೆ.