ಬಿಜಾಪುರ/ಹಾವೇರಿ: ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಾದ ಹಾನಗಲ್ ಹಾಗೂ ಸಿಂದಗಿಯಲ್ಲಿಂದು ಉಪಚುನಾವಣೆ ಮತದಾನ ನಡೆಯಲಿದೆ. ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಮತದಾನಕ್ಕೆ ಅವಕಾಶ ನೀಡಲಾಗಿದ್ದು,ಇದಕ್ಕಾಗಿ ಉಭಯ ಜಿಲ್ಲಾಡಳಿತ ಸಂಪೂರ್ಣ ತಯಾರಿ ಮಾಡಿಕೊಂಡಿವೆ.
ಆಡಳಿತ ಪಕ್ಷ ಬಿಜೆಪಿ, ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ಗೆ ಪ್ರತಿಷ್ಠೆಯ ಕಣವಾಗಿರುವ ಕಾರಣ ಮೂರು ಪಕ್ಷದ ನಾಯಕರು ಕ್ಷೇತ್ರಗಳಲ್ಲಿ ಭರ್ಜರಿ ಪ್ರಚಾರ ನಡೆಸಿ, ಮತದಾರರನ್ನ ಸೆಳೆಯುವ ಕಸರತ್ತು ನಡೆಸಿದ್ದಾರೆ. ಪ್ರಮುಖವಾಗಿ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರಿಗೆ ಎದುರಾಗಿರುವ ಮೊದಲ ಚುನಾವಣೆ ಇದಾಗಿರುವ ಕಾರಣ ಗೆಲುವು ದಾಖಲು ಮಾಡುವ ಲೆಕ್ಕಾಚಾರದಲ್ಲಿದೆ.
ಹಾವೇರಿಯ ಹಾನಗಲ್ನಲ್ಲಿ ಒಟ್ಟು 2,04,481 ಮತದಾರರಿದ್ದು, ಇದರಲ್ಲಿ 1,05,405 ಪುರುಷರು ಹಾಗೂ 98,798 ಮಹಿಳಾ ಮತರಾರರಿದ್ದಾರೆ. ಒಟ್ಟು 236 ಮತಗಟ್ಟೆ ಸ್ಥಾಪನೆ ಮಾಡಲಾಗಿದ್ದು, ಇದರಲ್ಲಿ ಎರಡು ಸಖಿ ಮಗಟ್ಟೆ ಹಾಗೂ ಮತ್ತೊಂದು ವಿಶೇಷಚೇತನರಿಗೆ ನಿರ್ಮಿಸಲಾಗಿದೆ. ಒಟ್ಟು 1155 ಸಿಬ್ಬಂದಿ ನಿಯೋಜನೆಗೊಂಡಿದ್ದಾರೆ.
ಇದನ್ನೂ ಓದಿರಿ: ಪುನೀತ್ ರಾಜ್ಕುಮಾರ್ ನಿಧನ: ಅಜಯ್ ದೇವಗನ್ To ಅಭಿಷೇಕ್ ಬಚ್ಚನ್... ಬಾಲಿವುಡ್ ಕಂಬನಿ
ಸಿಂದಗಿಯಲ್ಲಿ ಒಟ್ಟು 2,34,309 ಮತದಾರರಿದ್ದು, ಇದರಲ್ಲಿ 1,20,949 ಪುರುಷ ಮತದಾರರು ಹಾಗೂ 1,13,327 ಮಹಿಳಾ ಮತದಾರರಿದ್ದಾರೆ. ಸಿಂದಗಿ ವಿಧಾನಸಭೆ ಕ್ಷೇತ್ರದಲ್ಲಿ ಒಟ್ಟು 297 ಮತದಾನ ಕೇಂದ್ರ ನಿರ್ಮಿಸಲಾಗಿದ್ದು, 1308 ಸಿಬ್ಬಂದಿ ಚುನಾವಣಾ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದೆ.
ಉಪಚುನಾವಣೆಯಲ್ಲಿ ಹಾನಗಲ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಶಿವರಾಜ್ ಸಜ್ಜನರ, ಕಾಂಗ್ರೆಸ್ನಿಂದ ಶ್ರೀನಿವಾಸ್ ಮಾನೆ ಸ್ಪರ್ಧೆ ಮಾಡಿದ್ದು, ಜೆಡಿಎಸ್ನಿಂದ ನಿಯಾಜ್ ಶೇಖ್ ಕಣದಲ್ಲಿದ್ದಾರೆ. ಇನ್ನು ಸಿಂದಗಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ರಮೇಶ್ ಭೂಸನೂರು, ಕಾಂಗ್ರೆಸ್ನಿಂದ ಅಶೋಕ ಮನಗೂಳಿ ಹಾಗೂ ಜೆಡಿಎಸ್ನಿಂದ ಶಕೀಲಾ ಅಂಗಡಿ ಸ್ಪರ್ಧಿಯಾಗಿದ್ದಾರೆ.
ಉಭಯ ಕ್ಷೇತ್ರಗಳ ಮತದಾನದ ಫಲಿತಾಂಶ ನವೆಂಬರ್ 2ರಂದು ಬಹಿರಂಗಗೊಳ್ಳಲಿದೆ.